Site icon Vistara News

Independence day 2024: ಆಗಸ್ಟ್ 15ರ ಕುರಿತ 8 ಪ್ರಶ್ನೆಗಳಿಗೆ ಇಲ್ಲಿದೆ ಕುತೂಹಲಕರ ಉತ್ತರ!

Independence Day 2024

78ನೇ ಸ್ವಾತಂತ್ರ್ಯ ದಿನಾಚರಣೆಯ (Independence day 2024) ಸಂಭ್ರಮ ಪ್ರಾರಂಭವಾಗಲು ಕ್ಷಣಗಣನೆ ಪ್ರಾರಂಭವಾಗಿದೆ. ಪ್ರತಿ ವರ್ಷ ಆಗಸ್ಟ್ 15ರಂದು (August 15) ಆಚರಿಸಲಾಗುವ ಈ ದಿನದಂದು ರಾಷ್ಟ್ರಧ್ವಜ ಹಾರಿಸುವುದು, ದೇಶ ಭಕ್ತಿ ಗೀತೆಗಳನ್ನು ಹಾಡುವುದು, ಮೆರವಣಿಗೆ, ವಿವಿಧ ಸ್ಪರ್ಧೆಗಳನ್ನು ನಡೆಸುವುದು ವಾಡಿಕೆ. ಈ ವಿಶೇಷ ದಿನದಂದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಲು ಜನರು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಚಾರಗೋಷ್ಠಿಗಳನ್ನು ನಡೆಸುತ್ತಾರೆ. ಹಲವು ಶಾಲೆ, ಕಾಲೇಜುಗಳಲ್ಲಿ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳನ್ನೂ ನಡೆಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೇಳಬಹುದಾದ ಕೆಲವು ಪ್ರಶ್ನೆ ಮತ್ತು ಉತ್ತರಗಳು ಇಂತಿವೆ.

1947ರ ಆಗಸ್ಟ್ 15 ಭಾರತ ಸ್ವತಂತ್ರವಾದಾಗ ಅದು ಯಾವ ದಿನ(ವಾರ)ವಾಗಿತ್ತು?

1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷ್ ವಸಾಹತುಶಾಹಿ ನಿಯಂತ್ರಣದಿಂದ ತನ್ನ ಸ್ವಾತಂತ್ರ್ಯವನ್ನು ಅಧಿಕೃತವಾಗಿ ಗುರುತಿಸಿತು. ಇದು ವಿಶ್ವ ಇತಿಹಾಸದಲ್ಲಿ ಒಂದು ಮಹತ್ವದ ದಿನ ಮತ್ತು ಭಾರತೀಯ ಉಪಖಂಡಕ್ಕೆ ಒಂದು ಮಹತ್ವದ ತಿರುವು. ಶತಮಾನಗಳ ವಿದೇಶಿ ಪ್ರಾಬಲ್ಯವನ್ನು ಕೊನೆಗೊಳಿಸಿದ ಮತ್ತು ಸ್ವರಾಜ್ಯದ ಹೊಸ ಅವಧಿಗೆ ನಾಂದಿ ಹಾಡಿದ ಈ ಐತಿಹಾಸಿಕ ಘಟನೆ ʼಶುಕ್ರವಾರʼ ನಡೆಯಿತು.


ಭಾರತದ ರಾಷ್ಟ್ರಧ್ವಜವನ್ನು ಮೊದಲ ಬಾರಿಗೆ ಎಲ್ಲಿ ಹಾರಿಸಲಾಯಿತು?

ಭಾರತದ ರಾಷ್ಟ್ರಧ್ವಜವನ್ನು 1906ರ ಆಗಸ್ಟ್ 7ರಂದು ಕೋಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಲಾಯಿತು. ಹಸಿರು, ಹಳದಿ ಮತ್ತು ಕೆಂಪು ಧ್ವಜವು ಎಂಟು ಬಿಳಿ ಕಮಲಗಳನ್ನು ಅದು ಹೊಂದಿತ್ತು. ಬಳಿಕ ದೇವನಾಗರಿ ಬರವಣಿಗೆಯಲ್ಲಿ “ವಂದೇ ಮಾತರಂ” ಪದಗಳು, ಅರ್ಧಚಂದ್ರ ಮತ್ತು ಸೂರ್ಯ ಧ್ವಜದ ವಿನ್ಯಾಸವನ್ನು ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಅಭಿವೃದ್ಧಿಗೊಂಡಿತು. 1947ರಲ್ಲಿ ಈಗಿರುವ ಧ್ವಜ ರೂಪುಗೊಂಡಿತ್ತು.

ಭಾರತದ ರಾಷ್ಟ್ರಗೀತೆಯನ್ನು ಯಾವಾಗ ಅಧಿಕೃತವಾಗಿ ಅಂಗೀಕರಿಸಲಾಯಿತು?

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅಧಿಕೃತ ರಾಷ್ಟ್ರಗೀತೆ ಇರಲಿಲ್ಲ. ರವೀಂದ್ರನಾಥ ಟ್ಯಾಗೋರ್ ಅವರು 1911ರಲ್ಲಿ ಜನ ಗಣ ಮನವನ್ನು ಬರೆದರೂ ಅದನ್ನು ಔಪಚಾರಿಕವಾಗಿ 1950ರ ಜನವರಿ 25ರಂದು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು.

ಜನ ಗಣ ಮನವನ್ನು ಹಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಸರಿಯಾದ ವೇಗದಲ್ಲಿ ಹಾಡಿದಾಗ ಭಾರತೀಯ ರಾಷ್ಟ್ರಗೀತೆ ಜನ ಗಣ ಮನ, ಪೂರ್ಣಗೊಳ್ಳಲು ಸುಮಾರು 52 ಸೆಕೆಂಡುಗಳನ್ನು ಬೇಕಾಗುತ್ತವೆ.

ಲಾರ್ಡ್ ಮೌಂಟ್ ಬ್ಯಾಟನ್ ಭಾರತಕ್ಕೆ ಅಧಿಕಾರ ಹಸ್ತಾಂತರಿಸಲು ಆಗಸ್ಟ್ 15ನ್ನು ಏಕೆ ಆರಿಸಿಕೊಂಡರು?
ಬ್ರಿಟಿಷ್ ಪಾರ್ಲಿಮೆಂಟ್ ಲಾರ್ಡ್ ಮೌಂಟ್‌ಬ್ಯಾಟನ್ ಅವರಿಗೆ ಜವಾಬ್ದಾರಿಯನ್ನು ವರ್ಗಾಯಿಸಲು 1948ರ ಜೂನ್ 30ರವರೆಗೆ ಅಧಿಕಾರ ನೀಡಿತು. ಆದರೆ ಅವರು 1947ರ ಆಗಸ್ಟ್ 15 ಅನ್ನು ಆಯ್ಕೆ ಮಾಡಿದರು. ಯಾಕೆಂದರೆ ಇದು ಜಪಾನ್ ದೇಶವು ಮಿತ್ರ ಪಡೆಗಳಿಗೆ ಶರಣಾದ ಎರಡನೇ ವಾರ್ಷಿಕೋತ್ಸವವಾಗಿತ್ತು.


1947ರ ಆಗಸ್ಟ್ 15ರಂದು ಡಾಲರ್ ಮತ್ತು ರೂಪಾಯಿ ವಿನಿಮಯ ದರ ಎಷ್ಟಿತ್ತು?

1947ರ ಆಗಸ್ಟ್ 15ರ ಐತಿಹಾಸಿಕ ದಿನದಂದು, ಭಾರತವು ಸಾರ್ವಭೌಮತ್ವದ ಹೊಸ ಯುಗವನ್ನು ಪ್ರವೇಶಿಸಿದಾಗ 1 ಯುಎಸ್ ಡಾಲರ್ 1 ಭಾರತೀಯ ರೂಪಾಯಿ ವಿನಿಮಯ ದರವನ್ನು ಹೊಂದಿತ್ತು! ಭಾರತೀಯ ರೂಪಾಯಿ ತನ್ನ ಸ್ವತಂತ್ರ ಪ್ರಯಾಣವನ್ನು ಪ್ರಮುಖ ಜಾಗತಿಕ ಕರೆನ್ಸಿಯೊಂದಿಗೆ ಸಮಾನವಾಗಿ ಪ್ರಾರಂಭಿಸಿತು. ಆದರೆ ಈಗ ಒಂದು ಡಾಲರ್‌ ವಿನಿಮಯ ದರ ಸುಮಾರು 84 ರೂ. ಆಗಿದೆ!

ಭಾರತವನ್ನು ಹೊರತುಪಡಿಸಿ ಎಷ್ಟು ದೇಶಗಳು ಆಗಸ್ಟ್ 15ರಂದು ತಮ್ಮ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ?

ಹಲವಾರು ದೇಶಗಳು ಪ್ರಮುಖ ರಾಷ್ಟ್ರೀಯ ರಜಾದಿನಗಳನ್ನು ಅಥವಾ ತಮ್ಮ ವಿಶಿಷ್ಟ ಸ್ವಾತಂತ್ರ್ಯದ ದಿನಗಳನ್ನು ಆಗಸ್ಟ್ 15 ರಂದು ಆಚರಿಸುತ್ತವೆ.

ಇದನ್ನೂ ಓದಿ: Independence Day 2024: ವಾಟ್ಸ್‌ಆಪ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸ್ಟಿಕ್ಕರ್‌, ಮೆಸೆಜ್‌, ಇಮೇಜ್‌ ಪಡೆಯುವುದು ಹೇಗೆ?

ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ದಕ್ಷಿಣ ಮತ್ತು ಉತ್ತರ ಕೊರಿಯಾಗಳು ಜಪಾನಿನ ಆಕ್ರಮಣದಿಂದ ತಮ್ಮ ವಿಮೋಚನೆಯನ್ನು ನೆನಪಿಸಿಕೊಳ್ಳುತ್ತವೆ. ಕಾಂಗೋ ಗಣರಾಜ್ಯವು ಫ್ರಾನ್ಸ್‌ನಿಂದ ಪಡೆದ ಸ್ವಾತಂತ್ರ್ಯವನ್ನು ಸ್ಮರಿಸುತ್ತದೆ. ಆದರೆ ಬಹ್ರೇನ್ ಬ್ರಿಟಿಷ್ ಒಪ್ಪಂದದ ಸಂಬಂಧಗಳನ್ನು ಅನುಸರಿಸಿ ಸಾರ್ವಭೌಮ ರಾಷ್ಟ್ರವೆಂದು ಗುರುತಿಸಲ್ಪಟ್ಟ ದಿನವನ್ನು ಗುರುತಿಸುತ್ತದೆ. ಗಮನಾರ್ಹವಾಗಿ, ಲಿಚ್ಟೆನ್‌ಸ್ಟೈನ್‌ನ ಪುಟ್ಟ ರಾಷ್ಟ್ರವು ತನ್ನ ರಾಷ್ಟ್ರೀಯ ದಿನವನ್ನು ಸ್ಮರಿಸುತ್ತದೆ.

Exit mobile version