Site icon Vistara News

Viral Video | ಸ್ವಾತಂತ್ರ್ಯ ಹಬ್ಬಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿ ಭರ್ಜರಿ ಡ್ಯಾನ್ಸ್​

Independence Day Mamata Banerjee joins tribal folk dancers

ಕೋಲ್ಕತ್ತ: ಭಾರತಕ್ಕೆ ಇಂದು 75ನೇ ಸ್ವಾತಂತ್ರ್ಯ ಸಂಭ್ರಮ. ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಇದು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಗಿದ್ದರಿಂದ ಪ್ರತಿವರ್ಷಕ್ಕಿಂತಲೂ, ಈ ವರ್ಷ ಹೆಚ್ಚೇ ಎನ್ನುವಷ್ಟು ಸಂಭ್ರಮ ಇತ್ತು. ಎಲ್ಲ ಕಡೆ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಮಧ್ಯೆ ಮಮತಾ ಬ್ಯಾನರ್ಜಿ ಎಲ್ಲಕ್ಕಿಂತ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿದ್ದಾರೆ. ಕೋಲ್ಕತ್ತದ ರೆಡ್​ ರೋಡ್​​ನಲ್ಲಿ, ಜಾನಪದ ನೃತ್ಯ ಕಲಾವಿದರೊಂದಿಗೆ ಸೇರಿ ನೃತ್ಯ ಮಾಡಿದ್ದಾರೆ. ವಿಡಿಯೋ ಸಖತ್​ ವೈರಲ್ ಆಗುತ್ತಿದೆ.

ಸುಮಾರು ಒಂದು ನಿಮಿಷದ ವಿಡಿಯೋ ಇದಾಗಿದ್ದು, ಅದರಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರು ಜಾನಪದ ನೃತ್ಯ ಮಾಡುತ್ತಿರುವುದನ್ನೂ, ಅವರೊಂದಿಗೆ ಮಮತಾ ಬ್ಯಾನರ್ಜಿ ಹೆಜ್ಜೆ ಹಾಕುವುದನ್ನೂ ನೋಡಬಹುದು. ಹಿನ್ನೆಲೆಯಲ್ಲಿ ಡ್ರಮ್​ ಬೀಟ್​, ಸಂಗೀತ ಕೂಡ ಕೇಳುತ್ತದೆ.

ಮಮತಾ ಬ್ಯಾನರ್ಜಿ ನೃತ್ಯ ಮಾಡುತ್ತಿರುವ ವಿಡಿಯೋ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ‘ಮಮತಾ ಬ್ಯಾನರ್ಜಿ ನಿಜಕ್ಕೂ ಸ್ಫೂರ್ತಿದಾಯಕ ಮಹಿಳೆ. ಮಮತಾ ಬ್ಯಾನರ್ಜಿಯನ್ನು ಹೊರಗಿನವರು ಬೇರೆಯದ್ದೇ ರೀತಿ ಅಳೆಯುತ್ತಾರೆ. ಅವರನ್ನು ಕೆಟ್ಟವರಂತೆ ಬಿಂಬಿಸುತ್ತಾರೆ. ಆದರೆ ಅವರನ್ನು ಹತ್ತಿರದಿಂದ ಬಲ್ಲ ಒಂದಷ್ಟು ಜನರಿಗೆ ಮಾತ್ರ ಗೊತ್ತು, ದೀದಿ ಎಷ್ಟು ಭಾವುಕ ಮನಸಿನವರು ಎಂಬುದು. ಮಹಿಳೆಯರ ಜೀವನಶೈಲಿಯನ್ನು ಬದಲಿಸುವ ಪ್ರಯತ್ನದಲ್ಲಿ ಸದಾ ಇರುತ್ತಾರೆ. ಅದಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ’ ಎಂದು ತಿಳಿಸಿದರು.

ಮಮತಾ ಬ್ಯಾನರ್ಜಿ ವಿಶ್​
75ನೇ ವರ್ಷದ ಸ್ವಾತಂತ್ರ್ಯೋತ್ಸವ ನಿಮಿತ್ತ ಮಮತಾ ಬ್ಯಾನರ್ಜಿ ಇಂದು ಟ್ವೀಟ್​ ಮೂಲಕ ಶುಭಕೋರಿದ್ದಾರೆ. ‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತಮ್ಮ ಜೀವವನ್ನೇ ತ್ಯಾಗ ಮಾಡಿದ ಎಲ್ಲರನ್ನೂ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ಮರಿಸೋಣ. ಸ್ವಾತಂತ್ರ್ಯ ಹೋರಾಟಗಾರರು ಹಾಕಿಕೊಟ್ಟ ಪರಂಪರೆಯನ್ನು ನಾವೆಲ್ಲ ಭಾರತೀಯರು ಸದಾ ಸಂರಕ್ಷಿಸೋಣ. ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಜನರ ಹಕ್ಕುಗಳ ಘನತೆಯನ್ನು ಎತ್ತಿ ಹಿಡಿಯೋಣ’ ಎಂದು ಹೇಳಿದ್ದರು.

ಇದನ್ನೂ ಓದಿ: Anubrata Mondal | ಸಿಎಂ ಮಮತಾ ಬ್ಯಾನರ್ಜಿ ಆಪ್ತ ಅನುಬ್ರತಾ ಮಂಡಲ್​ರನ್ನು ಬಂಧಿಸಿದ ಸಿಬಿಐ

Exit mobile version