ನವ ದೆಹಲಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮುಂಜಾನೆ 7.30ಕ್ಕೆ ದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಿದರು. ಅದಕ್ಕೂ ಮೊದಲು ಅವರು ರಾಜ್ಘಾಟ್ಗೆ ತೆರಳಿ, ಮಹಾತ್ಮ ಗಾಂಧಿಯವರ ಸಮಾಧಿಗೆ ನಮಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಶ್ವೇತವಸ್ತ್ರದ ಮೇಲೆ ನೀಲಿ ಜಾಕೆಟ್ ಧರಿಸಿದ್ದಾರೆ. ಹಾಗೇ, ಕೇಸರಿ, ಬಿಳಿ, ಹಸಿರು ಬಣ್ಣಗಳಿರುವ ರುಮಾಲನ್ನು ತಲೆಗೆ ಹಾಕಿಕೊಂಡಿದ್ದು ವಿಶೇಷವಾಗಿದೆ. ಅಂದಹಾಗೇ, ಕಳೆದ ಎರಡು ಅವಧಿಗಳಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು 9ನೇ ಬಾರಿಗೆ ಇಂದು ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಿದಂತಾಗಿದೆ.
ಇಂದು ಮುಂಜಾನೆ ಕೆಂಪು ಕೋಟೆ ತಲುಪಿದ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಬರಮಾಡಿಕೊಂಡರು. ವಾಯುಸೇನೆ, ಭೂಸೇನೆ ಮತ್ತು ನೌಕಾಪಡೆ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಿದರು. ಈ ಬಾರಿ ಕೆಂಪುಕೋಟೆ ಸುತ್ತಲೂ ಇನ್ನೂ ಹೆಚ್ಚಿನ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪ್ರಸಕ್ತ ಸಲದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತರು, ರಸ್ತೆ ಬದಿ ವ್ಯಾಪಾರಿಗಳು, ಮುದ್ರಾ ಯೋಜನೆ ಫಲಾನುಭವಿಗಳು, ಶವಾಗಾರಗಳಲ್ಲಿ ಕೆಲಸ ಮಾಡುವವರನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: Har Ghar Tiranga | ರಾಷ್ಟ್ರಧ್ವಜಗಳನ್ನು ಮಕ್ಕಳಿಗೆ ಹಂಚಿ, ಸಂಭ್ರಮಿಸಿದ ಪ್ರಧಾನಿ ಮೋದಿ ತಾಯಿ