ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 156 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದಾಖಲೆಯ ಜಯ ಸಾಧಿಸಿದ್ದರೆ, ಆಮ್ ಆದ್ಮಿ ಪಕ್ಷ ಖಾತೆ ತೆರೆಯುವ ಜತೆ 5 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಲ್ಲೀಗ ಆಪ್ ಪಕ್ಷದ ಶಾಸಕರು (AAP MLAs) ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈಗ ಮೂವರು ಪಕ್ಷೇತರರೂ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಧರ್ಮೇಂದ್ರಸಿನ್ಹ ವಘೇಲಾ(ವಘೋಡಿಯಾ), ಧಾವಲ್‌ಸಿನ್ಹ ಝಾಲಾ(ಬಯಾಡ್) ಮತ್ತು ಮಾವ್ಜಿ ಭಾಯಿ ದೇಸಾಯಿ(ಧನೇರಾ) ಪಕ್ಷೇತರರು ಶಾಸಕರು ಬಿಜೆಪಿ ಸೇರಲಿದ್ದಾರೆ. ಈಗಾಗಲೇ ಅವರು ತಾವು ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿದ್ದರು. ಚುನಾವಣೆ ಪೂರ್ವ ಈ ಮೂವರು ಬಿಜೆಪಿ ಟಿಕೆಟ್ ಪಡೆದುಕೊಂಡು ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಬಿಜೆಪಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಹಾಗಾಗಿ, ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಈಗ ಗೆದ್ದ ಬಳಿಕ ಮತ್ತೆ ಬಿಜೆಪಿ ಸೇರಲು ಹೊರಟಿದ್ದಾರೆ.
ಮೂವರು ಪಕ್ಷೇತರರ ಜತೆಗೆ ಆಮ್ ಆದ್ಮಿ ಪಕ್ಷದ ಐವರು ಶಾಸಕರ ಪೈಕಿ ಮೂವರು ಬಿಜೆಪಿ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದೆ. ಭೂಪತ್ ಭಯಾನಿ ಅವರು ಬಿಜೆಪಿ ಸೇರುವ ಸುದ್ದಿಗಳ ದಟ್ಟವಾಗಿವೆ. ಆದರೆ, ಅವರು ಈ ವರದಿಯನ್ನು ಮೊದಲಿಗೆ ತಳ್ಳಿ ಹಾಕಿದ್ದರು. ಬಳಿಕ, ತಮ್ಮ ಕ್ಷೇತ್ರದ ಮತದಾರರ ಸಲಹೆ ಪಡೆದುಕೊಂಡು ಬಿಜೆಪಿ ಸೇರುವ ಬಗ್ಗೆ ತೀರ್ಮಾನಿಸುವುದಾಗಿ ಹೇಳಿಕೊಂಡಿದ್ದರು.
ವಿಸಾವಧರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಭೂಪತ್ ಭಯಾನಿ 2017ರವರೆಗೂ ಬಿಜೆಪಿಯಲ್ಲೇ ಇದ್ದರು. ಆ ವರ್ಷದ ಗುಜರಾತ್ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೇ ವೇಳೆ, ಉಮೇಶ್ ಮಕ್ವಾನಾ(ಬೋಟಾಡ್) ಮತ್ತ ಸುಧೀರ್ ವಾಘಾನಿ(ಗರಿಯಾಧರ್) ಅವರೂ ಬಿಜೆಪಿ ಸೇರಲಿದ್ದಾರೆಂದು ಹೇಳಲಾಗುತ್ತಿದೆ. ಐವರು ಪೈಕಿ ನಾಲ್ವರು ಆಪ್ ಶಾಸಕರು ಬಿಜೆಪಿಯನ್ನು ಸೇರಿದರೆ, ಆಗ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯವಾಗುವುದಿಲ್ಲ. ಹಾಗಾಗಿ, ಒಟ್ಟು ನಾಲ್ವರು ಆಪ್ ಶಾಸಕರು ಬಿಜೆಪಿ ಸೇರುವುದನ್ನು ಅಲ್ಲಗಳೆಯುವಂತಿಲ್ಲ.
ಆದರೆ, ಮಕ್ವಾನಾ ಅವರು ಬಿಜೆಪಿ ಸೇರ್ಪಡೆಯಾಗುವ ಸುದ್ದಿಯನ್ನು ನಿರಾಕರಿಸಿದ್ದಾರೆ. ಇದೊಂದು ನಿರಾಧಾರ ಸುದ್ದಿ ಎಂದು ಹೇಳಿದ್ದಾರೆ. ಅಲ್ಲದೇ, ಆಪ್‌ನ ಐವರು ಶಾಸಕರ ಪೈಕಿ ಯಾರೋಬ್ಬರು ಬಿಜೆಪಿ ಸೇರ್ಪಡೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇಷ್ಟಾಗಿಯೂ, ಆಪ್‌ನ ಐವರು ಶಾಸಕರ ಪೈಕಿ ನಾಲ್ವರು ಬಿಜೆಪಿ ಸೇರಲಿದ್ದಾರೆಂದು ಆ ಪಕ್ಷವು ಹೇಳಿಕೊಂಡಿದೆ. ಆಮ್ ಆದ್ಮಿ ಪಕ್ಷ ಈ ವಿಧಾನಸಭೆ ಚುನಾವಣೆಯಲ್ಲಿ 5 ಕ್ಷೇತ್ರಗಳನ್ನು ಗೆದ್ದಿದ್ದು, ಒಟ್ಟಾರೆ ಶೇ.12.92ರಷ್ಟು ಮತ ಗಳಿಸಿದೆ.
ಇದನ್ನೂ ಓದಿ | ಗುಜರಾತ್-ಹಿಮಾಚಲದಲ್ಲಿ ಕೆಲಸ ಮಾಡಲಿಲ್ಲ ಆಪ್ ‘ಉಚಿತ’ ಭರವಸೆಗಳು; ಎರಡೂ ರಾಜ್ಯಗಳ ಜನರಿಂದಲೂ ತಿರಸ್ಕಾರ