ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election) ಆಮ್ ಆದ್ಮಿ ಪಾರ್ಟಿ (Aam Admi Party) ಮತ್ತು ಸಮಾಜವಾದಿ ಪಾರ್ಟಿ (Samajwadi Party) ಮಧ್ಯೆ ಕಾಂಗ್ರೆಸ್ ಪಕ್ಷವು (Congress Party) ಸೀಟು ಹಂಚಿಕೆಯನ್ನು (Seat Sharing) ಅಂತಿಮಗೊಳಿಸಿ ಬೀರಿದ ಜಯದ ನಗೆ ಬಹಳ ಹೊತ್ತು ಉಳಿಯಲಿಲ್ಲ. ಯಾಕೆಂದರೆ, ಇಂಡಿಯಾ ಕೂಟದ (India Alliance) ಮತ್ತೊಂದು ಪ್ರಮುಖ ಪಕ್ಷವಾದ ತೃಣಮೂಲ ಕಾಂಗ್ರೆಸ್ (TMC), ಪಶ್ಚಿಮ ಬಂಗಾಳದಲ್ಲಿ (West Bengal) ಎಲ್ಲ 42 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದೆ. ದಿಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆ ಅಂತಿಮಗೊಳಿಸಲು ಯಶಸ್ವಿಯಾಗಿದ್ದ ಕಾಂಗ್ರೆಸ್, ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಜತೆ ಮಾತುಕತೆಯನ್ನು ಆರಂಭಿಸಿತ್ತು. ಆದರೆ, ಯಶಸ್ಸು ದೊರೆತಿಲ್ಲ.
ರಾಜ್ಯಸಭೆಯಲ್ಲಿ ತೃಣಮೂಲ ನಾಯಕರಾಗಿರುವ ಡೆರೆಕ್ ಒ’ಬ್ರೇನ್ ಅವರು, ಕೆಲವು ವಾರಗಳ ಹಿಂದೆ, ಟಿಎಂಸಿ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳದ ಎಲ್ಲಾ 42 ಸ್ಥಾನಗಳಲ್ಲಿ ಟಿಎಂಸಿ ಸ್ಪರ್ಧಿಸುತ್ತಿದೆ ಎಂದು ಹೇಳಿದ್ದಾರೆ. ನಾವು ಕೂಡ, ಅಸ್ಸಾಮ್ ಹಾಗೂ ಮೇಘಾಲಯದ ಒಂದು ಕ್ಷೇತ್ರದಲ್ಲಿ ಕಣದಲ್ಲಿ ಇರಲಿವೆ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿರುವ ಮತ್ತು ದೆಹಲಿ, ಗುಜರಾತ್, ಗೋವಾದಲ್ಲಿ ಎಎಪಿ ಜೊತೆ ಒಪ್ಪಂದ ಮಾಡಿಕೊಂಡಿರುವ ಇಂಡಿಯಾ ಮೈತ್ರಿ ಕೂಟ ಹಾಗೂ ಕಾಂಗ್ರೆಸ್‌ಗೆ, ಟಿಎಂಸಿಯ ಈ ಹೇಳಿಕೆಯು ಭಾರೀ ಹಿನ್ನಡೆಯನ್ನು ತಂದಿದೆ.
ಪಶ್ಚಿಮ ಬಂಗಾಳದಲ್ಲಿನ ಒಪ್ಪಂದವು ವಿರೋಧ ಪಕ್ಷಕ್ಕೆ ಪ್ರಮುಖ ನೈತಿಕ ವರ್ಧಕವಾಗುತ್ತಿತ್ತು. ಸಂಸತ್ತಿಗೆ ಮೂರನೇ ಅತಿ ಹೆಚ್ಚು ಸಂಸದರನ್ನು ಕಳುಹಿಸುವ ರಾಜ್ಯವಾಗಿರುವುದುರಿಂದ ಚುನಾವಣೆಗೆ ಮೈತ್ರಿ ಪ್ರಮುಖವಾಗಿದೆ. ಆದರೆ, ಟಿಎಂಸಿಯ ನಿಲವು ಮಾತ್ರ ವಿರೋಧಾಭಾಸದಿಂದ ಕೂಡಿದ್ದು, ಕೂಟದ ಐಕ್ಯತೆಗೆ ಭಂಗ ತಂದಿದೆ.
ಕಾಂಗ್ರೆಸ್ ಜತೆ ಯಾವುದೇ ಸೀಟು ಹೊಂದಾಣಿಕೆ ಸಿದ್ಧವಿಲ್ಲ ಎಂಬ ಸಂಕೇತಗಳು ತೃಣಮೂಲ ಕಾಂಗ್ರೆಸ್ ಪಾಳೆಯದಿಂದ ಹೊರ ಬಂದವು. ಹಾಗಾಗಿ, ಪಶ್ಚಿಮ ಬಂಗಾಳದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮೈತ್ರಿಕೂಟದ ಲೆಕ್ಕಾಚಾರಗಳು ಬುಡಮೇಲಾಗಿವೆ. 2019ರ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಐದು ಸ್ಥಾನಗಳಿಗೆ ಮೈತ್ರಿಯನ್ನು ಮುಂದಿಟ್ಟಿತ್ತು. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ವಕ್ತಾರರು, ಬೈನಾಕುಲರ್‌ಗಳಲ್ಲೂ ಕಾಂಗ್ರೆಸ್‌ನ ಮೂರನೇ ಸ್ಥಾನವು ಕಾಣಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: INDIA Alliance: ದಿಲ್ಲಿ ಬಳಿಕ ಗೋವಾ, ಹರ್ಯಾಣ, ಗುಜರಾತ್‌ನಲ್ಲೂ ಕಾಂಗ್ರೆಸ್-ಆಪ್ ಸೀಟು ಹಂಚಿಕೆ ಫೈನಲ್!