ನವದೆಹಲಿ: ಉತ್ತರ ಪ್ರದೇಶದಲ್ಲಿ (Uttar Pradesh) ಕಾಂಗ್ರೆಸ್ (Congress Party) ಮತ್ತು ಸಮಾಜವಾದಿ ಪಕ್ಷದ (Samajwadi Party) ನಡುವೆ ಸೀಟು ಹಂಚಿಕೆ (Seat Sharing) ಏರ್ಪಟ್ಟ ಬೆನ್ನಲ್ಲೇ, ಇಂಡಿಯಾ ಕೂಟದ (INDIA Alliance) ಮತ್ತೊಂದು ಪಾಲುದಾರ ಪಕ್ಷವಾದ ಆಮ್ ಆದ್ಮಿ ಪಾರ್ಟಿ (AAP) ಜತೆಗೂ ದಿಲ್ಲಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸೀಟು ಹಂಚಿಕೆಯನ್ನು ಫೈನಲ್ ಮಾಡಿದೆ. ದಿಲ್ಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರದಲ್ಲಿ ಆಪ್ ಮತ್ತು 3 ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಇದರ ಬೆನ್ನಲ್ಲೇ ಆಪ್ ಮತ್ತು ಕಾಂಗ್ರೆಸ್‌ಗಳೆರಡೂ ಗೋವಾ, ಹರ್ಯಾಣ, ಗುಜರಾತ್‌ಗಳಲ್ಲೂ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿವೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಪ್ರತಿಪಕ್ಷಗಳ ಕೂಟವಾದ ಇಂಡಿಯಾ ನಿಧಾನವಾಗಿ ಒಂದು ಹಂತಕ್ಕೆ ಬಿಜೆಪಿಯ ಎದುರು ಪ್ರತಿರೋಧ ತೋರುವ ಪ್ರಯತ್ನವನ್ನು ಮಾಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲೂ ಕಾಂಗ್ರೆಸ್ ಮತ್ತು ಆಪ್ ನಡುವೆ ಸೀಟು ಹಂಚಿಕೆ ಫೈನಲ್ ಆಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನ ಗೆದ್ದಿರುವ ಆಪ್, ಭರುಚ ಮತ್ತು ಭಾವನಗರ ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈಗಾಗಲೇ ಈ ಎರಡು ಕ್ಷೇತ್ರಗಳಿಗೆ ಆಪ್ ತನ್ನ ಅಭ್ಯರ್ಥಿಗಳನ್ನು ಹೆಸರಿಸಿದೆ. ಮನ್ಸುಖಭಾಯಿ ವಾಸವಾ ಮತ್ತು ಭಾರ್ತಿ ಶಿಯಾಲ್ ಅವರು ಕ್ರಮವಾಗಿ ಭರುಚ ಮತ್ತು ಭಾವನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ ಸಂಸದರಾಗಿದ್ದಾರೆ. ಗುಜರಾತ್‌ನಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳಿವೆ. 2014 ಮತ್ತು 2019ರಲ್ಲಿ ಗುಜರಾತ್‌ನ ಎಲ್ಲ ಲೋಕಸಭೆ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ.
ಇದೇ ವೇಳೆ ಚಂಡೀಗಢ ಲೋಕಸಭೆ ಕ್ಷೇತ್ರವು ಕಾಂಗ್ರೆಸ್ ಪಾಲಾಗಿದೆ. ಸದ್ಯ ಈ ಕ್ಷೇತ್ರವನ್ನು ಬಿಜೆಪಿಯ ಕಿರೋನ್ ಖೇರ್ ಅವರು ಪ್ರತಿನಿಧಿಸುತ್ತಿದ್ದಾರೆ. ಇವರು 2014 ಮತ್ತು 2019ರಲ್ಲಿ ಸತತವಾಗಿ ಗೆದ್ದಿದ್ದಾರೆ. ಇದಕ್ಕೂ ಮುಂಚಿನ ಮೂರು ಅವಧಿಗೆ ಕಾಂಗ್ರೆಸ್ ನಾಯಕ ಪವನ್ ಕುಮಾರ್ ಬನ್ಸಾಲ್ ಅವರು ಗೆದ್ದಿದ್ದರು.
ಒಟ್ಟು 10 ಕ್ಷೇತ್ರಗಳು ಇರುವ ಹರ್ಯಾಣದಲ್ಲೂ ಆಮ್ ಆದ್ಮಿ ಪಾರ್ಟಿ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಗುಜರಾತ್‌ನಂತೆ ಹರ್ಯಾಣದಲ್ಲೂ ಬಿಜೆಪಿ ಪ್ರಾಬಲ್ಯವನ್ನು ಹೊಂದಿದೆ. ಶೇ.60ರಷ್ಟು ಮತಗಳೊಂದಿಗೆ ಬಿಜೆಪಿ ಎಲ್ಲ 10 ಕ್ಷೇತ್ರಗಳನ್ನು ಗೆದ್ದಿದೆ. ಕಾಂಗ್ರೆಸ್ ಕೇವಲ ಶೇ.29ರಷ್ಟು ಮತ ಪಡೆಯಲಷ್ಟೇ ಶಕ್ಯವಾಗಿದೆ.
ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾದಲ್ಲಿ ಒಂದು ಕ್ಷೇತ್ರದಲ್ಲಿ ಆಪ್ ಸ್ಪರ್ಧಿಸುವ ಸಾಧ್ಯತೆ ಇದೆ. ಆಪ್ ನಾಯಕ ವೆಂಜಿ ವಿಗಾಸ್ ಅವರು ದಕ್ಷಿಣ ಗೋವಾದಿಂದ ಸ್ಪರ್ಧಿಸುವುದಾಗಿ ಈ ಹಿಂದೆಯೇ ಹೇಳಿದ್ದರು. ಇದುವೇ ನಿಜವಾದರೆ, ಮತ್ತೊಂದು ಕ್ಷೇತ್ರ ಉತ್ತರ ಗೋವಾದಲ್ಲಿ ಕಾಂಗ್ರೆಸ್ ಸ್ಪರ್ಧಿಸಬಹುದು. ಆದರೆ, ಈ ಕುರಿತು ಇನ್ನೂ ಸ್ಪಷ್ಟ ನಿರ್ಧಾರ ಹೊರ ಬಿದ್ದಿಲ್ಲ ಎನ್ನಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: INDIA Bloc: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 17, ಎಸ್‌ಪಿ 63 ಕ್ಷೇತ್ರಗಳಲ್ಲಿ ಸ್ಪರ್ಧೆ! ಬಗೆ ಹರಿದ ಸೀಟು ಹಂಚಿಕೆ ಬಿಕ್ಕಟ್ಟು