ನವ ದೆಹಲಿ: ಕೇಂದ್ರದಲ್ಲಿ ತಮ್ಮ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತ ವಿಶ್ವದ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದು ಖಚಿತ ಎಂದು ನರೇಂದ್ರ ಮೋದಿ (Narendra Modi) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದುವೇ ಮೋದಿ ಗ್ಯಾರಂಟಿ ಎಂಬುದಾಗಿ ದೇಶದ ಪ್ರಜೆಗಳಿಗೆ ಅವರು ಭರವಸೆ ನೀಡಿದ್ದಾರೆ. ಬಜೆಟ್ ಅಧಿವೇಶನದ (budget session) ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡಿದ ಅವರು ಮುಂದಿನ ಅವಧಿಯಲ್ಲಿ ತಮ್ಮ ಸರ್ಕಾರ ಬಂದರೆ ಆಗಲಿರುವ ಆರ್ಥಿಕ ಅಭಿವೃದ್ಧಿಯ ಕಲ್ಪನೆಯನ್ನು ಜನರ ಮುಂದಿಟ್ಟರು.
Speaking in the Lok Sabha. https://t.co/cwxdw7xo8S
— Narendra Modi (@narendramodi) February 5, 2024
ಯುಪಿಎ ನೇತೃತ್ವದ ಸರ್ಕಾರವು ಈ ಹಿಂದೆ ಭಾರತಕ್ಕೆ 3ನೇ ಬಲಿಷ್ಠ ಆರ್ಥಿಕ ಶಕ್ತಿಯಾಗಲು 30 ವರ್ಷ ಬೇಕು ಎಂದಿತ್ತು. ಅದರೆ, ನಾವು ನಮ್ಮ ಮೂರನೇ ಅವಧಿಯಲ್ಲೇ ಈ ಸಾಧನೆ ಮಾಡಲಿದ್ದೇವೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
2014ರಲ್ಲಿ ಭಾರತ 11ನೇ ಆರ್ಥಿಕ ಸ್ಥಾನದಲ್ಲಿತ್ತು. ನಮ್ಮ ಸರ್ಕಾರ ಎರಡನೇ ಅವಧಿಯಲ್ಲಿ ಸಾಕಷ್ಟು ಪ್ರಗತಿ ತಂದಿದೆ. ಇಂದು ಭಾರತವು ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ ಎಂದು ಹೇಳಿದ ಮೋದಿ, ಯುಪಿಎ ಸರ್ಕಾರದ ವಿತ್ತ ಸಚಿವ ಪಿ. ಚಿದಂಬರಂರ ಕೊನೆಯ ಬಜೆಟ್ ಭಾಷಣವನ್ನು ಪರೋಕ್ಷವಾಗಿ ಉಲ್ಲೇಖಿಸಿದರು. ಆ ವೇಳೆ ಭಾರತ 11ನೇ ಆರ್ಥಿಕ ಶಕ್ತಿಯಾಗಿದ್ದೇ ಗೌರವದ ಮಾತಾಗಿತ್ತು. ಆ ವೇಳೆ ಮುಂದಿನ 3 ದಶಕದಲ್ಲಿ ಭಾರತದ ಜಿಡಿಪಿ 3ನೇ ಸ್ಥಾನಕ್ಕೆ ಹೋಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ನಾವು ಅದಕ್ಕಿಂತ ಸಾಕಷ್ಟು ಮೊದಲೇ ಅದನ್ನು ಸಾಧಿಸಲಿದ್ದೇವೆ ಎಂದು ಮೋದಿ ಹೇಳಿದರು.
ನಾವು ಈ ಪವಿತ್ರ ಸಂಸತ್ನಲ್ಲಿ ನಿಂತಿದ್ದೇವೆ. ತಮ್ಮ 3ನೇ ಅವಧಿಯಲ್ಲಿ ಭಾರತ ವಿಶ್ವದ 3ನೇ ಆರ್ಥಿಕ ಶಕ್ತಿಯಾಗಲಿದೆ ಎಂಬ ಖಾತರಿ ನನಗಿದೆ ಎಂದು ಹೇಳಿದರು. ಕಾಂಗ್ರೆಸ್ ಮನಸ್ಥಿತಿ ಹೇಗಿತ್ತು ಎಂದರೆ, ನಮ್ಮ ದೇಶದ ಸಾಮರ್ಥ್ಯದ ಮೇಲೆ ವಿಶ್ವಾಸವೇ ಇಟ್ಟಿರಲಿಲ್ಲ. ಕಾಂಗ್ರೆಸ್ನ ಮಂದಗತಿಯ ಜೊತೆಗೆ ಯಾರೂ ಸ್ಪರ್ಧೆ ಮಾಡಲು ಸಾಧ್ಯ ಆಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದರು.
ಇದನ್ನೂ ಓದಿ : Narendra Modi : ಭಾರತೀಯರು ಸೋಮಾರಿಗಳೆಂದು ಅವಮಾನಿಸಿದ್ದ ನೆಹರೂ, ಇಂದಿರಾ: ಮೋದಿ ಆಕ್ರೋಶ
ನಾವು ಬಡವರಿಗಾಗಿ 4 ಕೋಟಿ ಮನೆ ನಿರ್ಮಾಣ ಮಾಡಿದ್ದೇವೆ. ನಗರದಲ್ಲಿನ ಬಡವರಿಗಾಗಿ 80 ಲಕ್ಷ ಮನೆ ನಿರ್ಮಾಣ ಮಾಡಿದ್ದೇವೆ. ಕಾಂಗ್ರೆಸ್ಗೆ ಇಷ್ಟೊಂದು ಮನೆ ನಿರ್ಮಾಣ ಮಾಡಲು ನೂರು ವರ್ಷ ಬೇಕಾಗುತ್ತಿತ್ತು. 5 ತಲೆಮಾರುಗಳು ಕಳೆದುಹೋಗುತ್ತಿದ್ದವು ಎಂದು ಮೋದಿ ಟೀಕಿಸಿದರು.
ಕಳೆದ 10 ವರ್ಷದಲ್ಲಿ 40 ಸಾವಿರ ಕಿಲೋಮೀಟರ್ ರೈಲ್ವೇ ಮಾರ್ಗ ವಿದ್ಯುದ್ದೀಕರಣ ಮಾಡಿದ್ದೇವೆ. ಕಾಂಗ್ರೆಸ್ ನವರ ವೇಗದಲ್ಲಿ ಮಾಡಿದ್ದರೆ 80 ವರ್ಷ ಬೇಕಾಗುತ್ತಿತ್ತು ಎಂಬುದಾಗಿ ಪ್ರಧಾನಿ ಮೋದಿ ವಿಶ್ಲೇಷಣೆ ಮಾಡಿದರು.
ಮೂರನೇ ಬಾರಿಗೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆ ವೇಳೆ ನಾವು ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತೇವೆ. ಈ ವೇಳೆ ಕಾಂಗ್ರೆಸ್ ಸೇರಿದಂತೆ ಪ್ರತಿ ಪಕ್ಷಗಳು ಇದರಲ್ಲಿ ವಿಶೇಷ ಏನಿದೆ? ದೇಶ ತಾನಾಗಿಯೇ 3ನೇ ಆರ್ಥಿಕಯತ್ತ ಹೋಗಿದೆ ಎನ್ನುತ್ತಾರೆ ಎಂದು ಮೋದಿ ಕಾಂಗ್ರೆಸ್ನ ಮುಂದಿನ ಹೇಳಿಕೆಗಳ ಕುರಿತು ಗೇಲಿ ಮಾಡಿದರು.