Site icon Vistara News

Sanatana Dharma: ಸನಾತನ ಧರ್ಮದ ನಿರ್ನಾಮವೇ ‘ಇಂಡಿಯಾ ಒಕ್ಕೂಟ’ದ ಗುರಿ; ಚಾಟಿ ಬೀಸಿದ ಮೋದಿ

Narendra Modi On Sanatana Dharma

INDIA bloc aims to abolish Sanatana Dharma; PM Modi's First Response On Row

ಭೋಪಾಲ್:‌ ಸನಾತನ ಧರ್ಮದ ನಿರ್ಮೂಲನೆ ಕುರಿತು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆ ಬಳಿಕ ಉಂಟಾದ ವಿವಾದದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. “ಇಂಡಿಯಾ ಒಕ್ಕೂಟದ ಉದ್ದೇಶವು ಸನಾತನ ಧರ್ಮವನ್ನು (Sanatana Dharma) ನಿರ್ಮೂಲನೆ ಮಾಡುವುದೇ ಆಗಿದೆ. ಹಾಗಾಗಿ, ಇಂತಹ ದುಷ್ಟ ಉದ್ದೇಶದ ವಿರುದ್ಧ ನಾವು ಒಗ್ಗಟ್ಟಾಗಬೇಕು” ಎಂದು ನರೇಂದ್ರ ಮೋದಿ ಕರೆ ನೀಡಿದ್ದಾರೆ.

ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಮಧ್ಯಪ್ರದೇಶದಲ್ಲಿ 50 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದ ಅವರು, ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು. “ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಎಂಬ ಒಕ್ಕೂಟ ರಚಿಸಿವೆ. ಇದು ಇಂಡಿಯಾ ಒಕ್ಕೂಟ ಅಲ್ಲ ಘಮಂಡಿಯಾ (ಅಹಂಕಾರಿಗಳು) ಒಕ್ಕೂಟ ಆಗಿದೆ. ಕೆಲ ದಿನಗಳ ಹಿಂದಷ್ಟೇ ಘಮಂಡಿಯಾ ಒಕ್ಕೂಟದ ನಾಯಕರು ಮುಂಬೈನಲ್ಲಿ ಸಭೆ ನಡೆಸಿದರು. ಹಾಗೆಯೇ, ಇವರು ಭಾರತದ ಸಂಸ್ಕೃತಿ ಮೇಲೆ, ಸಂಪ್ರದಾಯ, ವಿಚಾರ, ಸಂಸ್ಕಾರ, ಪರಂಪರೆಯ ಮೇಲೆ ದಾಳಿ ನಡೆಸುವ, ಸನಾತನ ಧರ್ಮವನ್ನು ನಿರ್ನಾಮ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ” ಎಂದು ಟೀಕಿಸಿದರು.

“ಭಾರತದಲ್ಲಿ ಸಾವಿರಾರು ವರ್ಷಗಳಿಂದ ಸನಾತನದ ಆಚರಣೆ ಇದೆ. ಇಂತಹ ಇತಿಹಾಸವುಳ್ಳ ಸನಾತನ ವಿಚಾರಗಳನ್ನು ಅಳಿಸಿಹಾಕುವುದು ಪ್ರತಿಪಕ್ಷಗಳ ಒಕ್ಕೂಟದ ದುರುದ್ದೇಶವಾಗಿದೆ. ಮಹಾತ್ಮ ಗಾಂಧೀಜಿಯವರು ಜೀವಿತಾವಧಿ ಪೂರ್ತಿ ಸನಾತನ ಪರಂಪರೆಯನ್ನು ಪಾಲಿಸಿದರು. ದೇಶದಲ್ಲಿ ಅಸ್ಪೃಶ್ಯತೆ ವಿರುದ್ಧ ಹೋರಾಡಲು ಗಾಂಧೀಜಿಯವರಿಗೆ ಸನಾತನವು ಸ್ಫೂರ್ತಿ ನೀಡಿತು. ಸ್ವಾಮಿ ವಿವೇಕಾನಂದರಿಗೆ ಸನಾತನ ವಿಚಾರಗಳು ಪ್ರೇರಣೆ ನೀಡಿದವು” ಎಂದು ಹೇಳಿದರು.

ಹೋರಾಡಲು ಮೋದಿ ಕರೆ

ಇದನ್ನೂ ಓದಿ: Sanatana Dharma: ನಮಗೆ ಹೊಸ ಧರ್ಮವೇ ಬೇಕು; ‘ಸನಾತನ’ ವಿವಾದ ಬೆನ್ನಲ್ಲೇ ಹಿಂದು ಸಂಘಟನೆಯ ಆಗ್ರಹ

“ಮಹಾತ್ಮ ಗಾಂಧೀಜಿಯವರ ಕೊನೆಯ ಪದವೂ ರಾಮ್‌ ಎಂಬುದೇ ಆಗಿತ್ತು. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಅವರಿಗೆ ಸನಾತನ ವಿಚಾರಗಳು ಸ್ಫೂರ್ತಿ ತುಂಬಿದವು. ಇದೇ ಸನಾತನ ವಿಚಾರಗಳಿಂದ ಪ್ರೇರಣೆಗೊಂಡು ಲೋಕಮಾನ್ಯ ತಿಲಕರು ಗಣೇಶ ಉತ್ಸವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು. ಗಣೇಶ ಉತ್ಸವ ಮೂಲಕ ಜನರನ್ನು ಒಗ್ಗೂಡಿಸಿದರು. ಸನಾತನ ಸಂಸ್ಕೃತಿಯು ಶಬರಿಯ ಗುರುತಾಗಿದೆ. ಮಹರ್ಷಿ ವಾಲ್ಮೀಕಿಯವರ ಗುರುತಾಗಿದೆ. ಇಂತಹ ಸನಾತನವನ್ನು ಅಳಿಸಲು, ತುಂಡು ತುಂಡಾಗಿ ಮಾಡಲು ಇಂಡಿಯಾ ಒಕ್ಕೂಟ ಮುಂದಾಗಿದೆ. ಆದರೆ, ನಾವೆಲ್ಲ ಒಗ್ಗೂಡಿ ಇಂತಹ ಶಕ್ತಿಗಳ ವಿರುದ್ಧ ಹೋರಾಡಬೇಕು” ಎಂದು ಮೋದಿ ಕರೆ ನೀಡಿದರು.

“ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಇದನ್ನು ನಿರ್ಮೂಲನೆ ಮಾಡಬೇಕು” ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಹೇಳಿದ್ದರು. ಇದಾದ ಬಳಿಕ ಡಿಎಂಕೆಯ ಮತ್ತೊಬ್ಬ ಸಚಿವ ಎ. ರಾಜಾ ಕೂಡ ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದರು. ಸನಾತನ ಧರ್ಮದ ವಿರುದ್ಧ ಹೋರಾಡಲೆಂದೇ ಇಂಡಿಯಾ ಒಕ್ಕೂಟ ರಚಿಸಲಾಗಿದೆ ಎಂದು ಹೇಳಿದ್ದರು. ಹಾಗಾಗಿ, ನರೇಂದ್ರ ಮೋದಿ ಅವರು ಇಂಡಿಯಾ ಒಕ್ಕೂಟದ ವಿರುದ್ಧ ‘ಸನಾತನ’ ಅಸ್ತ್ರ ಬಳಸಿ ಟೀಕಿಸಿದ್ದರು.

Exit mobile version