ಮುಂಬೈ, ಮಹಾರಾಷ್ಟ್ರ: 26 ಪ್ರತಿ ಪಕ್ಷಗಳ ಕೂಟ ಇಂಡಿಯಾ(INDIA Bloc Meeting) ಮಹಾರಾಷ್ಟ್ರದ (Maharashtra State) ರಾಜಧಾನಿ ಮುಂಬೈನಲ್ಲಿ (Mumbai City) ಶಕ್ತಿ ಪ್ರದರ್ಶನ ಮಾಡುತ್ತಿದೆ. ಈ ಹಿಂದೆ, ಬಿಹಾರದ ಪಾಟ್ನಾ ಮತ್ತು ಕರ್ನಾಟಕದ ಬೆಂಗಳೂರಲ್ಲಿ ಸಭೆ ನಡೆಸಿದ್ದ ಪ್ರತಿಪಕ್ಷಗಳ ನಾಯಕರು(Opposition Party Leaders), ಇದೀಗ ಮೂರನೇ ಸಭೆಗಾಗಿ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಪ್ರತಿಪಕ್ಷಗಳ ಚಿಂತನ ಮಂಥನ ನಡೆಯಲಿದೆ. ಈಗಾಗಲೇ ಎಲ್ಲ ನಾಯಕರು ಮುಂಬೈಗೆ ತಲುಪಿದ್ದು, ರಾತ್ರಿ ವೇಳೆಗೆ ಔಪಚಾರಿಕ ಸಭೆ ನಡೆಯಲಿದೆ. ಸೆ.1ರಂದು ಸಭೆ ಒಟ್ಟು ನಿರ್ಧಾರವು ಹೊರ ಬೀಳಲಿದೆ. ಕೂಟದ ಲೋಗೋ, ಮುಖ್ಯಸ್ಥರು ಹಾಗೂ ಸೀಟು ಹಂಚಿಕೆ ಕುರಿತಂತೆ ಕೆಲವು ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.
ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಹಾಗೆಯೇ, ಒಕ್ಕೂಟಕ್ಕೆ ನಾಲ್ವರು ಸಂಚಾಲಕರನ್ನು ನೇಮಿಸಲಾಗುತ್ತಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರೇಸ್‌ನಲ್ಲಿದ್ದಾರೆ. ಪ್ರತಿಪಕ್ಷಗಳ 63 ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಧ್ಯಕ್ಷ, ಸಂಚಾಲಕರನ್ನು ನೇಮಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ಲೋಕಸಭೆ ಚುನಾವಣೆ ವೇಳೆ ಸ್ಪರ್ಧಿಸಲು ಆಯಾ 26 ಪಕ್ಷಗಳಿಗೆ ಸೀಟು ಹಂಚಿಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ, ಇಂಡಿಯಾ ಒಕ್ಕೂಟದ ಹೊಸ ಲೋಗೊವನ್ನು ಕೂಡ ಅನಾವರಣ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿಯ ಕುರಿತು ಯಾವುದೇ ಚರ್ಚೆ ನಡೆಯುವುದಿಲ್ಲ ಎನ್ನಲಾಗಿದೆ.
ಅದಾನಿ ವಿವಾದ-ಜೆಪಿಸಿಗೆ ಒತ್ತಾಯಿಸಿದ ರಾಹುಲ್ ಗಾಂಧಿ
ಇಂಡಿಯಾ ಕೂಟದ ಸಭೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಅದಾನಿ ಗ್ರೂಪ್ ಷೇರು ಅವ್ಯವಹಾರ ಕುರಿತು ಜಂಟಿ ಸಂಸೀಯದ ಸಮಿತಿ (jpc) ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಅವರು, ವಿಶೇಷ ಅಧಿವೇಶನ ಕುರಿತು ವ್ಯಂಗ್ಯವಾಡಿದರು. ಬಹುಶಃ ಇದು ಸ್ವಲ್ಪ ಗಾಬರಿಯ ಸೂಚಕವಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಸಂಸತ್ತಿನಲ್ಲಿ ಮಾತನಾಡಿದಾಗ ಸಂಭವಿಸಿದ ಅದೇ ರೀತಿಯ ಗಾಬರಿ, ಇದ್ದಕ್ಕಿದ್ದಂತೆ ನನ್ನ ಸಂಸತ್ ಸದಸ್ಯತ್ವವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಗಾಬರಿ ಇದು ಎಂದು ವಿಶೇಷ ಸಂಸತ್ ಅಧಿವೇಶನ ಕರೆದಿರುವ ಕುರಿತು ರಾಹುಲ್ ಹೇಳಿದರು.
ಅದಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನ ಪ್ರಶ್ನಿಸಿದ ರಾಹುಲ್ ಗಾಂಧಿ, ಅದಾನಿ ವಿಷಯವನ್ನು ಎತ್ತಿದಾಗ ಮೋದಿ ಗಾಬರಿಯಾಗುತ್ತಾರೆ. ಈ ಎಲ್ಲ ಸಂಗತಿಗಳು ಪ್ರಧಾನಿಗೆ ಬಹಳ ಹತ್ತಿರವಾಗಿವೆ. ನೀವು ಏನಾದರೂ ಅದಾನಿ ವಿಷಯವನ್ನು ಎತ್ತಿದರೋ ಅವರು ತುಂಬ ಗಾಬರಿಯಾಗುತ್ತಾರೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಮುಂಬೈನ ಗ್ರ್ಯಾಂಡ್ ಹಯಾತ್ ಹೊಟೇಲ್‌ನಲ್ಲಿ ಪ್ರತಿಪಕ್ಷಗಳ ಸಭೆ
ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಇಂಡಿಯಾ ಒಕ್ಕೂಟದ ನಾಯಕರು ತಂಗಲು 200 ಕೋಣೆಗಳನ್ನು ಬುಕ್ ಮಾಡಲಾಗಿದೆ. ಗುರುವಾರ ರಾತ್ರಿ ಉದ್ಧವ್ ಠಾಕ್ರೆ ಅವರು ನಾಯಕರಿಗೆ ಭೋಜನ ಕೂಟ ಆಯೋಜಿಸಿದ್ದಾರೆ. ಸೀಟು ಹಂಚಿಕೆ ಹಾಗೂ ಲೋಗೊ ಅನಾವರಣ ಜತೆಗೆ 2024ರ ಲೋಕಸಭೆ ಚುನಾವಣೆ ಹಾಗೂ ಮಧ್ಯಪ್ರದೇಶ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಗೆಲುವಿಗೆ ರಣತಂತ್ರವನ್ನೂ ರೂಪಿಸಲಾಗುತ್ತದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: INDIA Bloc Meeting: ಎನ್‌ಡಿಎ, ‘ಇಂಡಿಯಾ’ ಜತೆ ಮೈತ್ರಿ ಇಲ್ಲ! ಎಲ್ಲ ಚುನಾವಣೆಗಳಲ್ಲಿ ಸ್ವತಂತ್ರ ಸ್ಪರ್ಧೆ ಎಂದ ಬಿಎಸ್‌ಪಿ ನಾಯಕಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಆರ್‌ಜೆಡಿಯ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಟಿಎಂಸಿಯ ಮಮತಾ ಬ್ಯಾನರ್ಜಿ, ಸಿಪಿಎಂನ ಸೀತಾರಾಮ್ ಯೆಚೂರಿ, ಶಿವಸೇನೆಯ ಉದ್ಧವ್ ಠಾಕ್ರೆ, ಎನ್‌ಸಿಪಿಯ ಶರದ್ ಪವಾರ್ ಸೇರಿ ಹಲವು ಪ್ರತಿಪಕ್ಷಗಳ ನಾಯಕರು ಎರಡು ದಿನಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.