Site icon Vistara News

Reservation Cap: ಅಧಿಕಾರಕ್ಕೆ ಬಂದರೆ ಮೀಸಲಾತಿ ಮಿತಿ ರದ್ದು; ರಾಹುಲ್‌ ಗಾಂಧಿ ಘೋಷಣೆ

Rahul Gandhi

ರಾಂಚಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಕೈಗೊಳ್ಳುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಯು (Bharat Jodo Nyay Yatra) ಜಾರ್ಖಂಡ್‌ನ ರಾಂಚಿ ತಲುಪಿದೆ. ರಾಂಚಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಗೆಲುವು ಸಾಧಿಸಿ, ಇಂಡಿಯಾ ಒಕ್ಕೂಟ (India Bloc) ಅಧಿಕಾರಕ್ಕೆ ಬಂದರೆ ದೇಶದಲ್ಲಿರುವ ಮೀಸಲಾತಿ ಮಿತಿಯನ್ನು ರದ್ದುಗೊಳಿಸಲಾಗುತ್ತದೆ” ಎಂದು ಭರವಸೆ ನೀಡಿದರು.

“ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ದೇಶದಲ್ಲಿರುವ ಶೇ.50ರಷ್ಟು ಮೀಸಲಾತಿಯ ಮಿತಿಯನ್ನು ರದ್ದುಗೊಳಿಸಲಾಗುತ್ತದೆ. ಮೀಸಲಾತಿ ಮಿತಿಯನ್ನು ರದ್ದುಗೊಳಿಸುವ ಮೂಲಕ ದಲಿತರು, ಬುಡಕಟ್ಟು ಸಮುದಾಯದವರು ಹಾಗೂ ಇತರೆ ಹಿಂದುಳಿದ ವರ್ಗದವರಿಗೆ (OBC) ಸರಿಯಾದ ನ್ಯಾಯವನ್ನು ಒದಗಿಸಲಾಗುತ್ತದೆ. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಮೀಸಲಾತಿ ಮಿತಿಯನ್ನು ರದ್ದುಗೊಳಿಸುವ ಮೂಲಕ ದಮನಿತರಿಗೆ ನ್ಯಾಯ ಒದಗಿಸಲಾಗುತ್ತದೆ” ಎಂದು ಭರವಸೆ ನೀಡಿದರು.

ದೇಶಾದ್ಯಂತ ಜಾತಿಗಣತಿ

ದೇಶದಲ್ಲಿ ದಲಿತರು, ಬುಡಕಟ್ಟು ಸಮುದಾಯದವರು ಹಾಗೂ ಒಬಿಸಿಯವರಿಗೆ ಭಾರಿ ಅನ್ಯಾಯವಾಗಿದೆ. ಅವರನ್ನು ಕಾರ್ಮಿಕರನ್ನಾಗಿ ಮಾಡಲಾಗಿದೆ. ದೊಡ್ಡ ದೊಡ್ಡ ಕಂಪನಿಗಳು, ಆಸ್ಪತ್ರೆಗಳು, ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಬಡವರು ಪ್ರವೇಶ ಪಡೆಯದಂತಾಗಿದೆ. ಇದನ್ನು ಸರಿಪಡಿಸುವ ದಿಸೆಯಲ್ಲಿ ದೇಶಾದ್ಯಂತ ಜಾತಿಗಣತಿಯನ್ನು ನಡೆಸುತ್ತಿವೆ. ಹಾಗೆಯೇ, ಮೀಸಲಾತಿ ಮಿತಿಯನ್ನು ರದ್ದುಗೊಳಿಸಿ ದೀನ-ದಲಿತರಿಗೆ ಸಮಾನ ಅವಕಾಶಗಳನ್ನು ನೀಡುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ: Mallikarjun Kharge: ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

ಮೋದಿ ವಿರುದ್ಧ ವಾಗ್ದಾಳಿ

ಜಾತಿಗಣತಿಯನ್ನು ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. “ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ತಾವು ಒಬಿಸಿ ಸಮುದಾಯದವರು ಎಂಬುದಾಗಿ ಹೇಳುತ್ತಾರೆ. ಆದರೆ, ಜಾತಿಗಣತಿಯನ್ನು ಅವರು ವಿರೋಧಿಸುತ್ತಾರೆ. ಬಡವರು ಹಾಗೂ ಶ್ರೀಮಂತರು ಎಂಬ ಎರಡೇ ಜಾತಿ ಇರುವುದು ಎಂದು ಹೇಳುತ್ತಾರೆ. ಬಡವರು, ದಲಿತರು, ಒಬಿಸಿಗಳು ಎಂದರೆ ನರೇಂದ್ರ ಮೋದಿ ಅವರಿಗೆ ಜಾತಿಗಳೇ ಇರುವುದಿಲ್ಲ. ಆದರೆ, ಮತಗಳು ಬೇಕು ಎಂದಾಗ ಅವರು ಒಬಿಸಿಯವರಾಗುತ್ತಾರೆ” ಎಂದು ಟೀಕಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version