ನವದೆಹಲಿ: ಸಂಸತ್ತಿನಲ್ಲಿ ಭಾರತ-ಚೀನಾ ಗಡಿ ವಿವಾದ (India-China Clash) ಕುರಿತು ಚರ್ಚಿಸಲು ಸರ್ಕಾರವು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳು ಲೋಕಸಭೆ ಕಲಾಪವನ್ನು ಬಹಿಷ್ಕರಿಸಿ, ಹೊರ ನಡೆದವು.
ಬುಧವಾರ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ ಮುಕ್ತಾಯವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, ಭಾರತ-ಚೀನಾ ಗಡಿ ವಿವಾದ ಕುರಿತು ಚರ್ಚಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೇ, ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರು 1962ರ ಭಾರತ-ಚೀನಾ ಯುದ್ಧ ಕುರಿತು ಚರ್ಚಿಸಲು ಸದನದಲ್ಲಿ ಅವಕಾಶ ಕಲ್ಪಿಸಿದ್ದರು ಎಂಬುದನ್ನು ಸದನದ ಗಮನಕ್ಕೆ ತಂದರು.
”ಭಾರತ-ಚೀನಾ ಗಡಿ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು. 1962ರಲ್ಲಿ ಭಾರತ-ಚೀನಾ ಯುದ್ಧ ನಡೆದಾಗ, ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಈ ಸದನದಲ್ಲಿ 165 ಸಂಸದರಿಗೆ ಮಾತನಾಡಲು ಅವಕಾಶ ನೀಡಿದ್ದರು. ಎದುರಾದ ಬಿಕ್ಕಟ್ಟಿನ ಕುರಿತು ಏನು ಮಾಡಬೇಕೆಂಬ ನಿರ್ಧಾರ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು,” ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಾಯಕರ ಬೇಡಿಕೆಗೆ ಪ್ರತಿಕ್ರಿಯಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, ಭಾರತ-ಗಡಿ ಚೀನಾ ವಿವಾದ ಕುರಿತು ಚರ್ಚಿಸುವ ಸಂಬಂಧ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಲ್ಲದೇ, ಮುಂದಿನ ಕಲಾಪಕ್ಕೆ ಅವರು ಅಣಿಯಾಗುತ್ತಿದ್ದಂತೆ ಕಾಂಗ್ರೆಸ್ ಸಂಸದರು ಗದ್ದಲ ಆರಂಭಿಸಿದರು. ಇದಕ್ಕೆ ಟಿಎಂಸಿ ಸಂಸದರೂ ದನಿಗೂಡಿಸಿದರು. ಸರ್ಕಾರವು ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ, ಪ್ರತಿಭಟನೆ ನಡೆಸಿದರು. ಅಲ್ಲದೇ ಕಲಾಪವನ್ನು ಬಹಿಷ್ಕರಿಸಿ, ಸದನದಿಂದ ಹೊರ ನಡೆದರು.
ಇದನ್ನೂ ಓದಿ | ವಿಸ್ತಾರ Explainer | ಭಾರತದ ಜತೆ ಚೀನಾ ಗಡಿ ಕಿರಿಕ್; ಏನಿದರ ಹಿನ್ನೆಲೆ?