Site icon Vistara News

ವಾಯುಪ್ರದೇಶ ಉಲ್ಲಂಘಿಸಬೇಡಿ: ಚೀನಾಕ್ಕೆ ಭಾರತದ ಖಡಕ್‌ ಸೂಚನೆ

airspace

ನವ ದೆಹಲಿ: ಚೀನಾದ ಕಡೆಯಿಂದ ವಾಯುಪ್ರದೇಶ ಉಲ್ಲಂಘನೆ ಮತ್ತು ಪ್ರಚೋದನೆಗಳ ನಡೆದಿರುವ ಮಧ್ಯೆಯೇ, ಭಾರತ ಮತ್ತು ಚೀನಾ ಇತ್ತೀಚೆಗೆ ಪೂರ್ವ ಲಡಾಖ್‌ನ ಚುಶುಲ್-ಮೊಲ್ಡೊ ಗಡಿ ಸಭೆಯ ಸ್ಥಳದಲ್ಲಿ ವಿಶೇಷ ಸುತ್ತಿನ ಮಿಲಿಟರಿ ಮಾತುಕತೆಗಳನ್ನು ನಡೆಸಿವೆ.

ವಾಯುಪ್ರದೇಶವನ್ನು ಉಲ್ಲಂಘಿಸುವ ಮೂಲಕ ಪೂರ್ವ ಲಡಾಖ್ ವಲಯದಲ್ಲಿ ಪ್ರಚೋದನೆ ನೀಡಲು ಚೀನಾದ ಹಲವು ಬಾರಿ ಪ್ರಯತ್ನಿಸಿದೆ. ಇದನ್ನು ಭಾರತೀಯ ವಾಯುಪಡೆ (ಐಎಎಫ್) ಎದುರಿಸಿದೆ. ಮಂಗಳವಾರ ಈ ಕುರಿತು ಉಭಯ ಕಡೆಗಳವರೂ ಮಾತುಕತೆ ನಡೆಸಿದರು. ಎರಡೂ ಕಡೆಯವರು ವಾಸ್ತವಿಕ ಗಡಿರೇಖೆಯ 10 ಕಿಮೀ ದೂರದ ಒಳಗೆ ಯುದ್ಧವಿಮಾನಗಳನ್ನು ಹಾರಾಡಿಸುವಂತಿಲ್ಲ.

ಪೂರ್ವ ಲಡಾಖ್ ಸೆಕ್ಟರ್ ಬಳಿ ಒಂದು ತಿಂಗಳಿನಿಂದಲೂ ಚೀನಾದ ಹಾರಾಟದ ಚಟುವಟಿಕೆಗಳ ಬಗ್ಗೆ ಭಾರತ ಬಲವಾಗಿ ಆಕ್ಷೇಪಣೆಗಳನ್ನು ಎತ್ತಿದೆ. ಇಂತಹ ಪ್ರಚೋದನಕಾರಿ ಚಟುವಟಿಕೆಗಳನ್ನು ತಪ್ಪಿಸುವಂತೆ ಸೂಚಿಸಲಾಗಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಉಭಯ ದೇಶಗಳ ನಡುವಿನ ಮಾತುಕತೆಯಲ್ಲಿ ಸೈನ್ಯದ ಪ್ರತಿನಿಧಿಗಳೊಂದಿಗೆ ಎರಡೂ ಕಡೆಯ ಐಎಎಫ್ ಅಧಿಕಾರಿಗಳಿದ್ದರು. IAF ಅನ್ನು ಏರ್ ಕಮೋಡೋರ್ ಅಮಿತ್ ಶರ್ಮಾ ಪ್ರತಿನಿಧಿಸಿದರೆ, ಪೀಪಲ್ಸ್ ಲಿಬರೇಶನ್ ಆರ್ಮಿಯ (PLA) ವಾಯುಪಡೆಯು ಚರ್ಚೆಗೆ ಸಮಾನ ಶ್ರೇಣಿಯ ಅಧಿಕಾರಿಯನ್ನು ಕಳುಹಿಸಿತು.

ಇತ್ತೀಚೆಗೆ, ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ, “ಚೀನಾದ ವಿಮಾನಗಳು ಅಥವಾ ರಿಮೋಟ್ ಪೈಲಟ್ ಏರ್‌ಕ್ರಾಫ್ಟ್ ಸಿಸ್ಟಮ್‌ಗಳು (ಆರ್‌ಪಿಎಎಸ್) ಎಲ್‌ಎಸಿಗೆ ಹತ್ತಿರ ಬರುತ್ತಿದ್ದರೆ, ನಾವು ನಮ್ಮ ಫೈಟರ್‌ಗಳನ್ನು ಸ್ಕ್ರಾಂಬ್ಲಿಂಗ್ ಮಾಡುವ ಮೂಲಕ ಅಥವಾ ನಮ್ಮ ಆರ್‌ಪಿಎಎಸ್‌ಗಳನ್ನು ಮುಂದೆ ಬಿಡುವ ಮೂಲಕ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇದು ಅವರನ್ನು ಸ್ವಲ್ಪ ಮಟ್ಟಿಗೆ ತಡೆದಿದೆ” ಎಂದು ತಿಳಿಸಿದ್ದಾರೆ.

2020ರಲ್ಲಿ ವಾಸ್ತವಿಕ ಗಡಿರೇಖೆಯಲ್ಲಿ LACಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಿಯರು ಪ್ರಯತ್ನಿಸಿದ್ದರು. ನಂತರ ಪ್ರಾರಂಭವಾದ ಉದ್ವಿಗ್ನತೆಯನ್ನು ಶಮನಗೊಳಿಸಲು ಉಭಯ ರಾಷ್ಟ್ರಗಳು ತಮ್ಮ ಕಮಾಂಡರ್ ಮಟ್ಟದ ಮಾತುಕತೆಗಳನ್ನು ನಡೆಸಿವೆ.

ಇದನ್ನೂ ಓದಿ: ತೈವಾನ್‌ ಮೂಲಕ ಸಾಗಿ ಜಪಾನ್‌ಗೆ ಅಪ್ಪಳಿಸಿದ ಚೀನಾದ ಕ್ಷಿಪಣಿಗಳು

Exit mobile version