ವಾರಾಣಸಿ: “ಭಾರತದಲ್ಲಿ ಕ್ಷಯರೋಗ ನಿರ್ಮೂಲನೆಗೆ ಕೇಂದ್ರ ಸರ್ಕಾರವು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. 2025ರಲ್ಲಿ ಭಾರತವನ್ನು ಕ್ಷಯರೋಗ ಮುಕ್ತ ದೇಶವನ್ನಾಗಿ ಮಾಡುವ ದಿಸೆಯಲ್ಲಿ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ಒನ್ ವರ್ಲ್ಡ್ ಟಿಬಿ ಸಮಿಟ್ ಉದ್ದೇಶಿಸಿ ಮಾತನಾಡಿದ ಅವರು, ದೇಶವು ಟಿಬಿ ಮುಕ್ತವಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಟಿಬಿ ಮುಕ್ತ ಪಂಚಾಯತ್ (TB Mukt Panchayat) ಅಭಿಯಾನಕ್ಕೂ ಅವರು ಚಾಲನೆ ನೀಡಿದರು.
ಕಳೆದ ಒಂಬತ್ತು ವರ್ಷದಲ್ಲಿ ದೇಶಾದ್ಯಂತ ಕ್ಷಯರೋಗ ನಿರ್ಮೂಲನೆಗೆ ಹಲವು ರೀತಿಯಲ್ಲಿ ಹೋರಾಟ ನಡೆಸಲಾಗಿದೆ. ಟಿಬಿ ನಿರ್ನಾಮಕ್ಕಾಗಿ ಕೇಂದ್ರ ಸರ್ಕಾರ ನಿ-ಕ್ಷಯ ಮಿತ್ರ (Ni-kshay Mitra) ಮಿಷನ್ ಜಾರಿಗೊಳಿಸಲಾಗಿದ್ದು, ಈ ಅಭಿಯಾನದ ಅನ್ವಯ ಪ್ರತಿಯೊಬ್ಬರೂ ಕನಿಷ್ಠ ಒಬ್ಬ ಟಿಬಿ ರೋಗಿಯನ್ನು ದತ್ತು ತೆಗೆದುಕೊಳ್ಳಿ ಎಂದು ಕರೆ ನೀಡಲಾಗಿತ್ತು. ಅದರಂತೆ, ಸಾಮಾನ್ಯ ಜನರು 10 ಲಕ್ಷ ಟಿಬಿ ರೋಗಿಗಳನ್ನು ದತ್ತು ತೆಗೆದುಕೊಂಡರು. 10-12 ವರ್ಷದ ಮಕ್ಕಳು ಕೂಡ ಕ್ಷಯರೋಗದ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡುತ್ತಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ
“ಇನ್ನೆರಡು ವರ್ಷದಲ್ಲಿ ಭಾರತವು ಕ್ಷಯರೋಗದಿಂದ ಮುಕ್ತವಾಗುವುದು ನಿಶ್ಚಿತ. ಹಾಗೆಯೇ, ಜಗತ್ತಿನಾದ್ಯಂತ 2030ರಲ್ಲಿ ಕ್ಷಯರೋಗ ಮುಕ್ತಗೊಳಿಸುವ ಗುರಿ ಇದೆ. ಆದರೆ, ಭಾರತವು ಜಾಗತಿಕ ಗುರಿಗಿಂತ ಐದು ವರ್ಷ ಮೊದಲೇ ಗುರಿ ಸಾಧಿಸಲಿದೆ. ಟಿಬಿ ವಿರುದ್ಧದ ಹೋರಾಟಕ್ಕೆ ಕಳೆದ ಒಂಬತ್ತು ವರ್ಷದಲ್ಲಿ ಜನ ಕೈಜೋಡಿಸಿದ್ದಾರೆ. ಸರ್ಕಾರವೂ ಜನರ ಸಹಭಾಗಿತ್ವ, ಪೌಷ್ಟಿಕಾಂಶ ಹೆಚ್ಚಳ, ಚಿಕಿತ್ಸೆ, ನಾವೀನ್ಯತೆ, ತಂತ್ರಜ್ಞಾನದ ಸಂಪೂರ್ಣ ಬಳಕೆ, ಚಿಕಿತ್ಸಾ ಕೇಂದ್ರಗಳ ಸ್ಥಾಪನೆ ಸೇರಿ ಹಲವು ರೀತಿಯ ಕ್ರಮ ತೆಗೆದುಕೊಂಡಿದೆ” ಎಂದು ತಿಳಿಸಿದರು.
“ನಿ-ಕ್ಷಯ ಮಿತ್ರ ಯೋಜನೆಗೇ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ಖರ್ಚು ಮಾಡಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಕ್ಷಯರೋಗಿಗಳು ಕೂಡ ಉಚಿತವಾಗಿ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT) ಅಡಿಯಲ್ಲಿ ದೇಶದ 75 ಕ್ಷಯರೋಗಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ 2 ಲಕ್ಷ ಕೋಟಿ ರೂಪಾಯಿಯನ್ನು ವರ್ಗಾವಣೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: World TB Day 2023 : ಕ್ಷಯರೋಗ ತಡೆಗೆ ಯಾವೆಲ್ಲಾ ಎಚ್ಚರಿಕೆ ಅಗತ್ಯ?
ಏನಿದು ಟಿಬಿ ಮುಕ್ತ ಪಂಚಾಯತ್ ಅಭಿಯಾನ?
ದೇಶದ ಪ್ರತಿಯೊಂದು ಪಂಚಾಯಿತಿಗಳು ಕೂಡ ಟಿಬಿಯಿಂದ ಮುಕ್ತವಾಗಬೇಕು ಎಂಬ ದಿಸೆಯಲ್ಲಿ ನರೇಂದ್ರ ಮೋದಿ ಅವರು ಟಿಬಿ ಮುಕ್ತ ಪಂಚಾಯತ್ ಅಭಿಯಾನಕ್ಕೆ ಚಾಲನೆ ನೀಡಿದರು. ಕ್ಷಯರೋಗ ನಿರ್ಮೂಲನೆಗಾಗಿ ಗ್ರಾಮ ಪಂಚಾಯಿತಿಯ ಪ್ರತಿಯೊಬ್ಬ ಸದಸ್ಯರು ಶ್ರಮ ವಹಿಸಬೇಕು. ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಟಿಬಿ ರೋಗಿಗಳನ್ನು ಗುರುತಿಸಿ, ಅವರಿಗೆ ಸರಿಯಾದ ಚಿಕಿತ್ಸೆ ನೀಡಿಸುವುದು ಅಭಿಯಾನದ ಉದ್ದೇಶವಾಗಿದೆ. ಹಾಗೆಯೇ, ಕ್ಷಯರೋಗ ಆವರಿಸದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಜನರಿಗೆ ಮಾಹಿತಿ ನೀಡುವುದು, ರೋಗದ ಕುರಿತು ಜಾಗೃತಿ ಮೂಡಿಸುವುದು ಕೂಡ ಅಭಿಯಾನದ ಭಾಗವಾಗಿದೆ.