ನ್ಯೂಯಾರ್ಕ್: ಅಮೆರಿಕದ ಮ್ಯಾನ್‌ಹಟನ್‌ನಲ್ಲಿ (Manhattan) ಆಗಸ್ಟ್ 18ರಂದು ನಡೆಯುವ 42ನೇ ವಾರ್ಷಿಕ ಭಾರತ ದಿನದ ಪರೇಡ್‌ನಲ್ಲಿ (India Day parade NYC 2024) ಅಯೋಧ್ಯೆ (Ayodhya) ರಾಮಮಂದಿರದ (ram mandir) ಟ್ಯಾಬ್ಲೋವನ್ನು (tableau) ಪ್ರದರ್ಶಿಸಲಾಗುತ್ತದೆ. ನ್ಯೂಯಾರ್ಕ್‌ನಲ್ಲಿರುವ (New York) ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ ನಡೆದ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ಎನ್ ವೈ, ಎನ್ ಜೆ, ಸಿಟಿ, ಎನ್ ಇ (ಎಫ್ ಐಎ) ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಈ ವಿಷಯ ಘೋಷಿಸಲಾಗಿದೆ.
ಈವೆಂಟ್ ಮ್ಯಾಡಿಸನ್ ಅವೆನ್ಯೂದಲ್ಲಿ ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 42ನೇ ವಾರ್ಷಿಕ ಭಾರತ ದಿನದ ಪರೇಡ್ ಆಗಸ್ಟ್ 18ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸಲಾಗುತ್ತದೆ. ಈ ಸಂದರ್ಭದಲ್ಲಿ ತ್ರಿವರ್ಣ ಧ್ವಜ, ದೇಶಭಕ್ತಿ ಮತ್ತು ಜನಪ್ರಿಯ ಭಾರತೀಯ ಹಾಡುಗಳನ್ನು ಪ್ರದರ್ಶಿಸಲಾಗುತ್ತದೆ. ಕಾರ್ಯಕ್ರಮದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದ ಎಫ್‌ಐಎ, ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾರತೀಯ ನಟ ಪಂಕಜ್ ತ್ರಿಪಾಠಿ ಆಗಮಿಸಲಿದ್ದಾರೆ ಎಂದು ತಿಳಿಸಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಾರತೀಯರು ಪಾಲ್ಗೊಳ್ಳಲಿದ್ದಾರೆ.
ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಬಿನಯ್ ಪ್ರಧಾನ್ ಅವರು ಪರೇಡ್‌ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ತಿಳಿಸಿದರು. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ನ್ಯೂಯಾರ್ಕ್‌ನ ಜನರಿಗೆ ತಲುಪಿಸಲು ಕಾನ್ಸುಲೇಟ್‌ನ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು.
ಎಫ್‌ಐಎ ಅಧ್ಯಕ್ಷ ಡಾ. ಅವಿನಾಶ್ ಗುಪ್ತಾ ಅವರು ಈ ವರ್ಷದ ಪರೇಡ್‌ನ ಥೀಮ್ ಅನ್ನು ಘೋಷಿಸಿ, ವಸುಧೈವ ಕುಟುಂಬಕಂ, ಅಂದರೆ ಜಗತ್ತು ಒಂದು ಕುಟುಂಬ ಎನ್ನುವುದು ಭಾರತದ ಸಾಂಸ್ಕೃತಿಕ ಸಾರವಾಗಿದೆ ಎಂದು ತಿಳಿಸಿದರು.
ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ 18 ಅಡಿ ಉದ್ದ, 9 ಅಡಿ ಅಗಲ ಮತ್ತು 8 ಅಡಿ ಅಳತೆಯ ರಾಮಮಂದಿರದ ಟ್ಯಾಬ್ಲೋವನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಪ್ರಕ್ರಿಯೆಯನ್ನು ಸೆರೆಹಿಡಿಯುವ ವಿಡಿಯೋವನ್ನು ಪ್ರಸ್ತುತಪಡಿಸಿದರು. ಇದು ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಅಯೋಧ್ಯೆಯಲ್ಲಿ ಇತ್ತೀಚೆಗೆ ನಿರ್ಮಿಸಲಾದ ಅಯೋಧ್ಯೆ ರಾಮಮಂದಿರದ ಮಾದರಿಯು ಸಾಂಸ್ಕೃತಿಕ ಗುರುತಿನ ಲಾಂಛನವಾಗಿದೆ.
ಕಾರ್ಯಕ್ರಮದಲ್ಲಿ ಅಮೆರಿಕದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿಎ), ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್), ಸಿದ್ಧಿವಿನಾಯಕ ದೇವಸ್ಥಾನ ಸೇರಿದಂತೆ ಹಲವು ಸಂಘಟನೆಗಳು ಪಾಲ್ಗೊಂಡಿದ್ದವು. ಈ ಸಂದರ್ಭದಲ್ಲಿ ರಾಮ ಮಂದಿರದ ಮಾದರಿಯನ್ನು ಪ್ರದರ್ಶಿಸಲಾಯಿತು.
ಇದನ್ನೂ ಓದಿ: Pak Govt: ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ದೂರವಾಣಿ ಕರೆಗಳನ್ನು ಕದ್ದಾಲಿಸುವ ಅಧಿಕಾರ ISIಗೆ ನೀಡಿದ ಪಾಕ್ ಸರ್ಕಾರ
ಎಫ್‌ಐಎ ಅಧ್ಯಕ್ಷ ಅಂಕುರ್ ವೈದ್ಯ ಅವರು ಎಫ್‌ಐಎ ಇತಿಹಾಸದ ಕುರಿತು ಮಾತನಾಡಿ, ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಲು ಜನರು ಮುಂದೆ ಬಂದು ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.