ಹೊಸದಿಲ್ಲಿ: ಅಫಘಾನಿಸ್ತಾನದ ಜತೆಗೆ ಭಾರತದ ವಿಶೇಷ ಬಾಂಧವ್ಯ ಮತ್ತು ಪಾಲುದಾರಿಕೆ ಮಹತ್ವದ್ದಾಗಿದ್ದು, ಅಬಾಧಿತವಾಗಿ ಮುಂದುವರಿಯಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ತಿಳಿಸಿದ್ದಾರೆ.
ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ 4ನೇ ಪ್ರಾದೇಶಿಕ ಭದ್ರತಾ ಮಾತುಕತೆಯಲ್ಲಿ ಭಾಗವಹಿಸಿದ ಅವರು ಈ ವಿಷಯ ತಿಳಿಸಿದರು.
ಭಾರತ ಮತ್ತು ಅಫಘಾನಿಸ್ತಾನದ ಜತೆ ವಿಶೇಷ ಬಾಂಧವ್ಯ ಇದೆ. ಇದು ಇಂದು ನಿನ್ನೆಯದ್ದಲ್ಲ. ಸುದೀರ್ಘ ಇತಿಹಾಸ ಇದಕ್ಕಿದೆ. ನಾಗರಿಕತೆಯ ಸಂಬಂಧ ಇದೆ. ಅದನ್ನು ಯಾವುದರಿಂದಲೂ ಬದಲಿಸಲು ಸಾಧ್ಯವಿಲ್ಲ. ಭಾರತ ಈಗಾಗಲೇ 17,000 ಟನ್ ಗೋಧಿಯನ್ನು ಅಫಘಾನಿಸ್ತಾನಕ್ಕೆ ಕಳುಹಿಸಿದೆ. ಒಟ್ಟು 50,000 ಟನ್ ಗೋಧಿಯನ್ನು ನೀಡಲಿದೆ. 50 ಲಕ್ಷ ಡೋಸ್ ಕೋವ್ಯಾಕ್ಸಿನ್, ಪೊಲಿಯೊ ಲಸಿಕೆ, 13 ಟನ್ ಅಗತ್ಯ ಔಷಧಗಳು, ಚಳಿಗಾಲದ ಅವಶ್ಯಕತೆಗೆ ಬಟ್ಟೆ, ಕಂಬಳಿಗಳನ್ನು ನೀಡಲಾಗಿದೆ. ಅಫಘಾನಿಸ್ತಾನದ ಜನತೆಯ ಹಿತಾಸಕ್ತಿ ಭಾರತದ ಆದ್ಯತೆ ಆಗಿದೆ. ಅಲ್ಲಿನ ಜನತೆಯ ಜನ ಜೀವನದ ಗುಣಮಟ್ಟ ಸುಧಾರಿಸಬೇಕು. ಗೌರವಯುತ ಬದುಕು ನಡೆಸುವಂತಾಗಬೇಕು. ಆದ್ದರಿಂದ ಅಫಘಾನಿಸ್ತಾನದ ಜನರ ಜತೆಗೆ ಭಾರತ ಇರಲಿದೆ ಎಂದು ವಿವರಿಸಿದರು.
ಭಯೋತ್ಪಾದನೆ ವಿರುದ್ಧ ಅಫಘಾನಿಸ್ತಾನದ ಜನತೆಯ ಹೋರಾಟಕ್ಕೆ ನೆರೆಹೊರೆಯ ದೇಶಗಳು ಸಹಕರಿಸಬೇಕು ಎಂದು ಅವರು ಹೇಳಿದರು.
ರಷ್ಯಾದ ಭದ್ರತಾ ಸಲಹೆಗಾರ ನಿಕೊಲೈ ಪಟ್ರುಸ್ತೆವ್ ಮಾತನಾಡಿ, ಅಫಘಾನಿಸ್ತಾನದಿಂದ ರಷ್ಯಾಕ್ಕೆ ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದು ಕಳವ ಮೂಡಿಸಿದೆ. ಇದು ಭಯೋತ್ಪಾದನೆ ಹೆಚ್ಚಳಕ್ಕೂ ಕಾರಣವಾಗಬಹುದು ಎಂದರು.