ನವ ದೆಹಲಿ: ಪ್ರಸಕ್ತ ವರ್ಷದ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ-SCO Meet) ಶೃಂಗದ ಆತಿಥ್ಯ ವಹಿಸಿರುವ ಭಾರತ, ಮುಂದಿನ ತಿಂಗಳು (ಏಪ್ರಿಲ್) ದೆಹಲಿಯಲ್ಲಿ ನಡೆಯಲಿರುವ ಎಸ್ಸಿಒ ಸಭೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ರಿಗೆ ಆಮಂತ್ರಣ ನೀಡಿದೆ. ಎಸ್ಇಒ ಶೃಂಗಸಭೆ ನಿಮಿತ್ತ ಈ ಸಂಘಟನೆಯಲ್ಲಿ ಇರುವ ದೇಶಗಳ ರಕ್ಷಣಾ ಸಚಿವರ ಸಭೆ ಏಪ್ರಿಲ್ನಲ್ಲಿ ನವದೆಹಲಿಯಲ್ಲಿ ನಡೆಯಲಿದ್ದು, ವಿದೇಶಾಂಗ ವ್ಯವಹಾರಗಳ ಸಚಿವರ ಸಭೆ ಮೇ ತಿಂಗಳಲ್ಲಿ ಗೋವಾದಲ್ಲಿ ಜರುಗಲಿದೆ. ಮೇ ತಿಂಗಳಲ್ಲಿ ಗೋವಾದಲ್ಲಿ ನಡೆಯಲಿರುವ ಸಭೆಗೂ ಭಾರತ ಈಗಾಗಲೇ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಗೆ ಆಹ್ವಾನ ನೀಡಿದೆ. ಇದೆರಡೂ ಸಭೆಗಳಿಗೆ ಆಯಾ ಇಲಾಖೆಗಳ ಸಚಿವರನ್ನು ಕಳಿಸಬೇಕೋ, ಬೇಡವೋ ಎಂಬ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ.
2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಉಜ್ಬೇಕಿಸ್ತಾನದ ಸಮರಖಂಡದಲ್ಲಿ ಶಾಂಘೈ ಸಹಕಾರ ಶೃಂಗಸಭೆ ನಡೆದಿತ್ತು. 2023ರಲ್ಲಿ ಈ ಸಭೆಯ ಆತಿಥ್ಯ ವಹಿಸುವ ದೇಶ ಭಾರತ ಎಂದು ಅಲ್ಲೇ ಘೋಷಿಸಲಾಗಿತ್ತು. ಅಂತೆಯೇ ಈ ಸಲ ಭಾರತ ಶಾಂಘೈ ಸಹಕಾರ ಶೃಂಗದ ಅಧ್ಯಕ್ಷತೆ ವಹಿಸಲಿದೆ. ಈ ಸಂಘಟನೆಯ ವ್ಯಾಪ್ತಿಯಲ್ಲಿ ಎಂಟು ದೇಶಗಳಾದ ಭಾರತ, ಚೀನಾ, ತಜಿಕಿಸ್ತಾನ್, ರಷ್ಯಾ, ಉಜ್ಬೇಕಿಸ್ತಾನ್, ಕಜಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನಗಳು ಇವೆ. ಯಾವ ದೇಶ ಆತಿಥ್ಯ ವಹಿಸುತ್ತದೆಯೋ ಆ ದೇಶ ಪೂರ್ವಭಾವಿ ಸಭೆಗಳನ್ನು ಆಯೋಜಿಸಿ, ಅದಕ್ಕೆ ಉಳಿದ ದೇಶಗಳ ಸಚಿವರನ್ನು ಆಹ್ವಾನಿಸಲೇಬೇಕು. ಅಂತೆಯೇ ಭಾರತ ತನ್ನ ಕರ್ತವ್ಯ ಮಾಡಿದೆ. ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ-ವ್ಯವಹಾರ ಇಲ್ಲ. ಅದು ಶತ್ರುದೇಶವೇ ಆಗಿದೆ. ಹಾಗಿದ್ದಾಗ್ಯೂ ಭಾರತ ಎರಡೂ ಸಭೆಗಳಿಗೆ ಪಾಕಿಸ್ತಾನಕ್ಕೆ ಆಹ್ವಾನ ನೀಡಿದೆ.
ಇದನ್ನೂ ಓದಿ: Asia Cup: ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲೇ ನಡೆಯಲಿದೆ; ಬಿಸಿಸಿಐಗೆ ಎಚ್ಚರಿಕೆ ನೀಡಿದ ನಜಮ್ ಸೇಥಿ