ನವದೆಹಲಿ: ಭಾರತ-ಚೀನಾ ಬಿಕ್ಕಟ್ಟಿನ ವಿಷಯದ ಕುರಿತು ಮಾತನಾಡುವಾಗ, “ಸೈನಿಕರು ಗಡಿಯಲ್ಲಿ ಪೆಟ್ಟು ತಿನ್ನುತ್ತಿದ್ದಾರೆ” ಎಂದಿದ್ದರು. ಈಗ ರಾಹುಲ್ ಗಾಂಧಿ (Rahul Gandhi) ಅವರು ಮತ್ತೊಂದು ಹೇಳಿಕೆ ನೀಡಿದ್ದಾರೆ. “ಭಾರತ ಈಗ ದುರ್ಬಲಗೊಂಡಿದೆ. ಚೀನಾ ಹಾಗೂ ಪಾಕಿಸ್ತಾನ ಈಗ ಒಗ್ಗಟ್ಟಾಗಿವೆ. ಈಗೇನಾದರೂ ಯುದ್ಧ ನಡೆದರೆ ಭಾರತವು ಚೀನಾ ಹಾಗೂ ಪಾಕಿಸ್ತಾನವನ್ನು ಎದುರಿಸಬೇಕಾಗುತ್ತದೆ” ಎಂದಿದ್ದಾರೆ.
ಭಾರತ್ ಜೋಡೋ ಯಾತ್ರೆ ಮಧ್ಯೆಯೇ ಹಿರಿಯ ಸೇನಾಧಿಕಾರಿಗಳೊಂದಿಗೆ ಸಂವಾದ ನಡೆಸಿದ ಅವರು ಗಡಿ ಬಿಕ್ಕಟ್ಟಿನ ಕುರಿತು ಮಾತನಾಡಿದರು. “ಚೀನಾ ಹಾಗೂ ಪಾಕಿಸ್ತಾನ ಒಗ್ಗಟ್ಟಾಗಿವೆ. ಹಾಗಾಗಿ, ನಮ್ಮ ಮೇಲೆ ಎರಡೂ ರಾಷ್ಟ್ರಗಳು ಯುದ್ಧ ಸಾರಬಹುದು. ಇದರಿಂದ ಭಾರತಕ್ಕೆ ಭಾರಿ ನಷ್ಟ ಆಗಲಿದೆ. ಅಷ್ಟಕ್ಕೂ ಈಗ ಭಾರತ ತುಂಬ ದುರ್ಬಲಗೊಂಡಿದೆ. ಹಾಗಾಂತ, ನಿಮ್ಮ (ಸೈನಿಕರು) ಮೇಲೆ ಗೌರವ ಇಲ್ಲ ಅಂತ ಅಲ್ಲ. ನೀವು ಈ ದೇಶವನ್ನು ರಕ್ಷಿಸುತ್ತೀರಿ. ನಿಮ್ಮ ಮೇಲೆ ಪ್ರೀತಿ ಇದೆ. ನೀವಿಲ್ಲದೆ ಈ ದೇಶಕ್ಕೆ ಅಸ್ತಿತ್ವವೇ ಇರುತ್ತಿರಲಿಲ್ಲ” ಎಂದಿದ್ದಾರೆ.
“ಅಂತಾರಾಷ್ಟ್ರೀಯ ಗಡಿ ರೇಖೆಯ ಪರಿಸ್ಥಿತಿ ನೋಡಿದರೆ, ಭಾರತದ ಗಡಿಯ ಪರಿಸ್ಥಿತಿ ಬದಲಾಗಿದೆ. ಏಕೆಂದರೆ, ನಾವು ಇಬ್ಬರು ವೈರಿಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಭಾರತವೇ ಪಾಕಿಸ್ತಾನ ಹಾಗೂ ಚೀನಾವನ್ನು ದೂರ ಇಟ್ಟು ವೈರತ್ವ ಕಟ್ಟಿಕೊಂಡಿದೆ. ಹಾಗಾಗಿ, ಚೀನಾ ಹಾಗೂ ಪಾಕಿಸ್ತಾನ ಮಾತ್ರವಲ್ಲ, ಭಯೋತ್ಪಾದನೆಯೂ ನಮ್ಮ ವಿರುದ್ಧ ಗುರಾಣಿಯಾಗಿ ಬಳಕೆಯಾಗಲಿದೆ” ಎಂದಿದ್ದಾರೆ.
ಇದನ್ನೂ ಓದಿ | Rahul Gandhi On Army | ನಮ್ಮ ಸೈನಿಕರಿಗೆ ಪೆಟ್ಟು ಬೀಳುತ್ತಿವೆ, ದೇಶದ ಯೋಧರಿಗೆ ರಾಹುಲ್ ಗಾಂಧಿ ಅವಮಾನ