Site icon Vistara News

Space Economy: ಬಾಹ್ಯಾಕಾಶದಲ್ಲಿ ಚೀನಾ, ರಷ್ಯಾವನ್ನು ಹಿಂದಿಕ್ಕಿ ಭಾರತ ಪಾರಮ್ಯ? ಏನಿದು ಟಾರ್ಗೆಟ್‌ 447 ಶತಕೋಟಿ ಡಾಲರ್?

India is taking on China in the $447 billion space economy, Can India Beat Russia also?

India is taking on China in the $447 billion space economy, Can India Beat Russia also?

ನವದೆಹಲಿ:‌ ಕಳೆದ ವಾರವಷ್ಟೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಭಾರತದ ಅತಿದೊಡ್ಡ ಉಡಾವಣಾ ವಾಹಕ ಮಾರ್ಕ್​ 111 (ಎಲ್​ವಿಎಂ3) ರಾಕೆಟ್ ಮೂಲಕ 36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆ ಮೂಲಕ ಬಾಹ್ಯಾಕಾಶದಲ್ಲಿ ಭಾರತವು ಮಹತ್ವದ ಮುನ್ನಡೆಯೊಂದನ್ನು ಸಾಧಿಸಿದೆ. ಇದರ ಬೆನ್ನಲ್ಲೇ, ಭಾರತವು ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿಯೂ (Space Economy) ಪ್ರಾಬಲ್ಯ ಸಾಧಿಸಲು ಮುಂದಾಗಿದ್ದು, ವಿಶ್ವದ ಬಾಹ್ಯಾಕಾಶ ಮಾರುಕಟ್ಟೆಯ ಮೌಲ್ಯವಾದ 447 ಶತಕೋಟಿ ಡಾಲರ್‌ ಮೇಲೆ ಕಣ್ಣಿಟ್ಟಿದೆ. ಅದರಲ್ಲೂ, ಚೀನಾ ಹಾಗೂ ರಷ್ಯಾದ ಸ್ಪರ್ಧೆಯನ್ನೂ ಮೀರಿ ಭಾರತ ಬೆಳೆಯಲು ಅವಕಾಶವಿದೆ ಎಂದೇ ಹೇಳಲಾಗುತ್ತಿದೆ.

ಹಾಗಾದರೆ, ಭಾರತವು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಇರುವ ಅವಕಾಶಗಳು ಯಾವವು? ಅದರಲ್ಲೂ, ರಷ್ಯಾ ಹಾಗೂ ಚೀನಾದ ಮಾರುಕಟ್ಟೆಯ ಪ್ರಾಬಲ್ಯವನ್ನು ಮೀರಿ ಹೇಗೆ ಭಾರತ ಪಾರಮ್ಯ ಸಾಧಿಸಲು ಸಾಧ್ಯ? ಇದಕ್ಕೆ ಜಾಗತಿಕ ಪರಿಸ್ಥಿತಿಗಳು ಎಷ್ಟು ಪೂರಕವಾಗಿವೆ? ಇಂಥದ್ದೊಂದು ಮೈಲುಗಲ್ಲನ್ನು ಭಾರತ ಸಾಧಿಸಲು ಸಾಧ್ಯವೇ ಎಂಬುದು ಸೇರಿ ಹಲವು ವಿಷಯಗಳ ಕುರಿತ ಮಾಹಿತಿ ಇಲ್ಲದೆ.

ಚೀನಾ, ರಷ್ಯಾವನ್ನು ಭಾರತ ಮೀರಿಸುವುದು ಹೇಗೆ?

ಚೀನಾ ಹಾಗೂ ರಷ್ಯಾವು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಬಲವಾಗಿವೆ. ಎರಡೂ ದೇಶಗಳು ಬೇರೆ ರಾಷ್ಟ್ರಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತವೆ. ಆದರೆ, ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿರುವ ಕಾರಣ ರಷ್ಯಾಗೆ ಬೇರೆ ರಾಷ್ಟ್ರಗಳಿಂದ ಉಪಗ್ರಹ ಯೋಜನೆಗಳು ಲಭಿಸುತ್ತಿಲ್ಲ. ಅತ್ತ, ಬೀಜಿಂಗ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಚೀನಾ ಕೂಡ ಉಡಾವಣೆಗಳನ್ನು ಮಿತಿಗೊಳಿಸಿದೆ. ಅಮೆರಿಕದ ಜತೆಗಿನ ಮುಸುಕಿನ ಗುದ್ದಾಟವೂ ಅದರ ಬಾಹ್ಯಾಕಾಶ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿದೆ. ಇದೇ ಕಾರಣಕ್ಕಾಗಿ ಭಾರತವು ಬಾಹ್ಯಾಕಾಶ ಉಡಾವಣೆ ಕೇಂದ್ರವಾಗಿ ಹೊರಹೊಮ್ಮುವ ಅವಕಾಶಗಳು ಹೆಚ್ಚಿವೆ.

ಇಸ್ರೋ ಕಳೆದ ವಾರ 36 ಉಪಗ್ರಹ ಉಡಾವಣೆ ಮಾಡಿದ ವಿಡಿಯೊ

ಒನ್‌ ವೆಬ್‌ ಜತೆ ಒಪ್ಪಂದ ಆಗಿದ್ದೇ ಹೀಗೆ…

ಹಾಗೆ ನೋಡಿದರೆ, ಬ್ರಿಟನ್‌ನ ಒನ್‌ವೆಬ್‌ ಕಂಪನಿಯ ಉಪಗ್ರಹಗಳ ಉಡಾವಣೆಯನ್ನು ರಷ್ಯಾ ಮಾಡಬೇಕಿತ್ತು. ಆದರೆ, ಉಕ್ರೇನ್‌ ಮೇಲೆ ಯುದ್ಧ ಸಾರಿದ ಕಾರಣ ಆ ಅವಕಾಶ ಭಾರತದ ಪಾಲಾಯಿತು. ಬ್ರಿಟನ್‌ನ ನೆಟ್ವರ್ಕ್​ ಆ್ಯಕ್ಸೆಸ್​ ಅಸೋಸಿಯೇಷನ್ ಲಿಮಿಟೆಡ್​ (ಒನ್​ ವೆಬ್​ ಗ್ರೂಪ್​ ಕಂಪನಿ) ಭಾರತದ ಇಸ್ರೋದ ವಾಣಿಜ್ಯಾತ್ಮಕ ಅಂಗಸಂಸ್ಥೆಯಾದ ನ್ಯೂ ಸ್ಪೇಸ್​ ಇಂಡಿಯಾ ಲಿಮಿಟೆಡ್​​ನೊಂದಿಗೆ ಸೇರಿ ಒಟ್ಟು 72 ಉಪಗ್ರಹಗಳನ್ನು ಭೂಮಿಯ ಕೆಳಹಂತದ ಕಕ್ಷೆಗೆ (LEO) ಸೇರಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಅದರ ಅನ್ವಯ ಈಗಾಗಲೇ 2022ರ ಅಕ್ಟೋಬರ್​​ನಲ್ಲಿ ಇಸ್ರೋದಿಂದ 36 ಉಪಗ್ರಹಗಳನ್ನು ಒಳಗೊಂಡ ಎಲ್​ವಿಎಂ3 ರಾಕೆಟ್​ನ್ನು ಉಡಾವಣೆ ಮಾಡಲಾಗಿತ್ತು. ಇದೇ ಒನ್​ವೆಬ್​ ಇಂಡಿಯಾ ಮಿಷನ್​​ನ ಮುಂದುವರಿದ ಭಾಗವಾಗಿ ಈಗ ಮತ್ತೆ 36 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಇದೇ ರೀತಿ ಮುಂದಿನ ದಿನಗಳಲ್ಲು ಹೆಚ್ಚಿನ ಅವಕಾಶಗಳು ಭಾರತದ ಪಾಲಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.

ಬಾಹ್ಯಾಕಾಶ ಮಾರುಕಟ್ಟೆ ವಿಸ್ತರಣೆ

2020ರಲ್ಲಿ ಲಭ್ಯವಾದ ಮಾಹಿತಿ ಪ್ರಕಾರ, ಜಾಗತಿಕವಾಗಿ ಬಾಹ್ಯಾಕಾಶ ಮಾರುಕಟ್ಟೆಯ ಮೌಲ್ಯವು 447 ಶತಕೋಟಿ ಡಾಲರ್‌ ಇದೆ. ಇನ್ನು ಇದು 2025ರ ವೇಳೆಗೆ 600 ಶತಕೋಟಿ ಡಾಲರ್‌ಗೆ ಏರಿಕೆಯಾಗಲಿದೆ ಎಂದು Ernst & Young ಸಂಸ್ಥೆಯು ಅಂದಾಜಿಸಿದೆ. ಇದು ಕೂಡ ಭಾರತದ ಪಾಲಿಗೆ ವರದಾನವಾಗುವ ಸಾಧ್ಯತೆ ಇದೆ. ಫ್ರಾನ್ಸ್‌ನ ಏರಿಯನ್‌ಸ್ಪೇಸ್‌ಗೆ ಯಾವುದೇ ಹೊಸ ರಾಕೆಟ್‌ ಉಡಾವಣೆಯ ಯೋಜನೆಗಳು ಸಿಗುತ್ತಿಲ್ಲ. ಎಲಾನ್‌ ಮಸ್ಕ್‌ ಅವರ ಸ್ಪೇಸ್‌ಎಕ್ಸ್‌ ಮೂಲಕ ಉಡಾವಣೆ ಮಾಡುವುದು ದುಬಾರಿ ಎನಿಸುತ್ತದೆ. ಅಮೆರಿಕ ಉದ್ಯಮಿ ರಿಚರ್ಡ್‌ ಬ್ರಾನ್ಸನ್‌ ಅವರ ವರ್ಜಿನ್‌ ಆರ್ಬಿಟ್‌ ಹೋಲ್ಡಿಂಗ್‌ ಕಂಪನಿಯೂ ಉಡಾವಣೆಗಳ ವೈಫಲ್ಯದಿಂದಾಗಿ ಉಡಾವಣೆಗಳ ಸಂಖ್ಯೆಯನ್ನು ಗಣನೀಯವಾಗಿ ಇಳಿಸಿದೆ.

“ಸ್ಪೇಸ್‌ಎಕ್ಸ್‌ ತುಂಬ ಬ್ಯುಸಿ ಆಗಿದ್ದರೆ ಅಥವಾ ದುಬಾರಿ ಎನಿಸಿದರೆ ಆಗ ಯಾವುದೇ ದೇಶವು ಚೀನಾದತ್ತ ನೋಡಲು ಸಾಧ್ಯವಿಲ್ಲ. ಅದರಲ್ಲೂ, ಅಮೆರಿಕ ಹಾಗೂ ಉತ್ತರ ಅಮೆರಿಕದ ಜತೆ ಚೀನಾ ಕೆಲಸ ಮಾಡಲು ಸಾಧ್ಯವೇ ಆಗುವುದಿಲ್ಲ. ಆಗ ಸಹಜವಾಗಿಯೇ ಉಡಾವಣೆಗೆ ಭಾರತವೇ ಒಳ್ಳೆಯ ದೇಶ ಎಂಬುದಾಗಿ ಅನಿಸುತ್ತದೆ” ಎಂದು ನಾರ್ತರ್ನ್‌ ಸ್ಕೈ ರಿಸರ್ಚ್‌ ಎಂಬ ಸಂಸ್ಥೆಯ ಡಾಲಾಸ್‌ ಕಸಬೋಸ್ಕಿ ತಿಳಿಸಿದ್ದಾರೆ. ಈ ಕಾರಣಗಳಿಂದಾಗಿ ಜಗತ್ತಿನ ಪ್ರಮುಖ ರಾಷ್ಟ್ರಗಳು ಉಪಗ್ರಹಗಳ ಉಡಾವಣೆಗೆ ಭಾರತದತ್ತ ನೋಡುವ ದಿನಗಳು ತುಂಬ ದೂರವಿಲ್ಲ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: LVM3 Rocket: 36 ಉಪಗ್ರಹಗಳನ್ನೊಳಗೊಂಡ ಎಲ್​ವಿಎಂ3 ರಾಕೆಟ್​​ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

Exit mobile version