ಮುಂಬೈ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಓಟವನ್ನು ಕಟ್ಟಿಹಾಕುವ ದಿಸೆಯಲ್ಲಿ 26 ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ‘ಇಂಡಿಯಾ’ ಒಕ್ಕೂಟದ ಸಭೆಯು (INDIA Meeting) ಗುರುವಾರದಿಂದ (ಆಗಸ್ಟ್ 31) ಆರಂಭವಾಗಲಿದೆ. ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಎರಡು ದಿನ ನಡೆಯುವ ಸಭೆಯಲ್ಲಿ ಇದರ ಜತೆಗೆ, ಇಂಡಿಯಾ ಒಕ್ಕೂಟದ ಮುಖ್ಯಸ್ಥರನ್ನಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಹಾಗೆಯೇ, ಒಕ್ಕೂಟಕ್ಕೆ ನಾಲ್ವರು ಸಂಚಾಲಕರನ್ನು ನೇಮಿಸಲಾಗುತ್ತಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರೇಸ್‌ನಲ್ಲಿದ್ದಾರೆ. ಪ್ರತಿಪಕ್ಷಗಳ 63 ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಧ್ಯಕ್ಷ, ಸಂಚಾಲಕರನ್ನು ನೇಮಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಭೆಗೆ ಮುಂಬೈ ಹೋಟೆಲ್ ಸಜ್ಜು
ಮುಂಬರುವ ಲೋಕಸಭೆ ಚುನಾವಣೆ ವೇಳೆ ಸ್ಪರ್ಧಿಸಲು ಆಯಾ 26 ಪಕ್ಷಗಳಿಗೆ ಸೀಟು ಹಂಚಿಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ, ಇಂಡಿಯಾ ಒಕ್ಕೂಟದ ಹೊಸ ಲೋಗೊವನ್ನು ಕೂಡ ಅನಾವರಣ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿಯ ಕುರಿತು ಯಾವುದೇ ಚರ್ಚೆ ನಡೆಯುವುದಿಲ್ಲ ಎನ್ನಲಾಗಿದೆ.
2 ದಿನ ಏನೆಲ್ಲ ನಡೆಯಲಿದೆ?
ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಇಂಡಿಯಾ ಒಕ್ಕೂಟದ ನಾಯಕರು ತಂಗಲು 200 ಕೋಣೆಗಳನ್ನು ಬುಕ್ ಮಾಡಲಾಗಿದೆ. ಗುರುವಾರ ರಾತ್ರಿ ಉದ್ಧವ್ ಠಾಕ್ರೆ ಅವರು ನಾಯಕರಿಗೆ ಭೋಜನ ಕೂಟ ಆಯೋಜಿಸಿದ್ದಾರೆ. ಸೀಟು ಹಂಚಿಕೆ ಹಾಗೂ ಲೋಗೊ ಅನಾವರಣ ಜತೆಗೆ 2024ರ ಲೋಕಸಭೆ ಚುನಾವಣೆ ಹಾಗೂ ಮಧ್ಯಪ್ರದೇಶ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಗೆಲುವಿಗೆ ರಣತಂತ್ರವನ್ನೂ ರೂಪಿಸಲಾಗುತ್ತದೆ ಎನ್ನಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಆರ್‌ಜೆಡಿಯ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಟಿಎಂಸಿಯ ಮಮತಾ ಬ್ಯಾನರ್ಜಿ, ಸಿಪಿಎಂನ ಸೀತಾರಾಮ್ ಯೆಚೂರಿ, ಶಿವಸೇನೆಯ ಉದ್ಧವ್ ಠಾಕ್ರೆ, ಎನ್‌ಸಿಪಿಯ ಶರದ್ ಪವಾರ್ ಸೇರಿ ಹಲವು ಪ್ರತಿಪಕ್ಷಗಳ ನಾಯಕರು ಎರಡು ದಿನಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.