Site icon Vistara News

ಮತ್ತೆ ಅಮೆರಿಕದ ಡಬಲ್‌ ಗೇಮ್‌! ಪಾಕ್‌ ಯುದ್ಧ ವಿಮಾನ ನವೀಕರಣಕ್ಕೆ ನೆರವು, ಭಾರತದಿಂದ ತೀವ್ರ ವಿರೋಧ

India Protest with US as Biden Govt Approves Sustainment Package to Pakistan

ನವದೆಹಲಿ: ಪಾಕಿಸ್ತಾನದ ಮಿಲಿಟರಿ ಕ್ಷೇತ್ರ ಅಭಿವೃದ್ಧಿಗೆ, ಅದರಲ್ಲೂ ಹಳತಾದ F-16 ಫೈಟರ್​ ಜೆಟ್ ​​(F-16 Fighter Jet)ಗಳನ್ನು ನವೀಕರಿಸಲು ಯುಎಸ್​ 450 ಮಿಲಿಯನ್​ ಡಾಲರ್​​ಗಳಷ್ಟು ಆರ್ಥಿಕ ನೆರವು ನೀಡಲು ಮುಂದಾಗಿದೆ. ಸದಾ ಉಗ್ರರನ್ನು ಪೋಷಿಸುವ ರಾಷ್ಟ್ರ ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನಕ್ಕೆ ಅಮೆರಿಕ ಇಷ್ಟು ದೊಡ್ಡ ಮೊತ್ತದ ಸುಸ್ಥಿರ ಪ್ಯಾಕೇಜ್​ ನೀಡಲು ನಿರ್ಧಾರ ಮಾಡಿದ್ದನ್ನು ಭಾರತ ತೀವ್ರವಾಗಿ ವಿರೋಧಿಸಿದೆ. ಯುಎಸ್​ ನಿರ್ಧಾರವನ್ನು ಭಾರತ ಸರ್ಕಾರ ಖಂಡಿಸುತ್ತಿರುವುದಾಗಿ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಯುಎಸ್​ ಕಾರ್ಯದರ್ಶಿ ಡೊನಾಲ್ಡ್​ ಲು ಅವರಿಗೆ ತಿಳಿಸಿದೆ. ಪಾಕ್​​ನ ಯುದ್ಧ ವಿಮಾನ ನವೀಕರಣಕ್ಕ ಸಹಾಯ ಮಾಡಲು ಯುಎಸ್​ ತೆಗೆದುಕೊಂಡಿರುವ ನಿರ್ಣಯ ತಪ್ಪು ಎಂದು ಪ್ರತಿಪಾದಿಸಿದೆ.

ಪಾಕಿಸ್ತಾನಕ್ಕೆ ವಾಷಿಂಗ್ಟನ್​​ನಿಂದ ಪ್ರತಿವರ್ಷವೂ ಆರ್ಥಿಕ ನೆರವು ಹೋಗುತ್ತಿತ್ತು. ಆದರೆ ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್​ ಟ್ರಂಪ್​ ಭಯೋತ್ಪಾದನೆಯ ಕಡು ವಿರೋಧಿಯಾಗಿದ್ದರು. ಪಾಕಿಸ್ತಾನ ಉಗ್ರರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬಲವಾದ ಅಭಿಪ್ರಾಯ ಅವರದ್ದಾಗಿತ್ತು. ಇಡೀ ವಿಶ್ವವೇ ಒಟ್ಟಾಗಿ ಪಾಕ್​ ಮೇಲೆ ಒತ್ತಡ ಹೇರಿದರೂ ಆ ದೇಶ ಉಗ್ರತ್ವ ನಿಯಂತ್ರಿಸುತ್ತಿಲ್ಲ, ತಾಲಿಬಾನ್​, ಹಕ್ಕಾನಿ ಜಾಲದ ಭಯೋತ್ಪಾದಕರನ್ನು ಪೋಷಿಸುವುದು ಬಿಟ್ಟಿಲ್ಲ ಎಂಬ ಆರೋಪ ಅವರದ್ದಾಗಿತ್ತು. ಹೀಗಾಗಿ ಯುಎಸ್​​ನಿಂದ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ 2 ಬಿಲಿಯನ್​ ಡಾಲರ್​ಗಳಷ್ಟು ಭದ್ರತಾ ನೆರವನ್ನು 2018ರಲ್ಲಿ ನಿಲ್ಲಿಸಿದ್ದರು. ಆದರೆ ನಾಲ್ಕು ವರ್ಷಗಳ ನಂತರ ಮತ್ತೆ ಜೋ ಬೈಡೆನ್​ ಸರ್ಕಾರ ಪಾಕಿಸ್ತಾನಕ್ಕೆ ನೆರವು ನೀಡಲು ಮುಂದಾಗಿದೆ.

ಯುಎಸ್​ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಪಾಕಿಸ್ತಾನ ಸ್ವತಃ ಉಗ್ರರಿಂದ ಸಂಕಷ್ಟಕ್ಕೀಡಾಗಿದೆ. ಭಯೋತ್ಪಾದನಾ ನಿಗ್ರಹಕ್ಕೆ ಅಗತ್ಯವಾದ ಮಿಲಿಟರಿ ಉಪಕರಣಗಳ ಕೊರತೆ ಆ ದೇಶಕ್ಕೆ ಇದೆ. ಹೀಗಾಗಿ ಅಲ್ಲಿನ ರಕ್ಷಣಾ ಕ್ಷೇತ್ರ ಸುಸ್ಥಿರತೆಗಾಗಿ ನಾವು ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದೆ. ಅಷ್ಟೇ ಅಲ್ಲ, ಪಾಕಿಸ್ತಾನದಲ್ಲಿ ಈಗಿರುವ ಯುದ್ಧ ವಿಮಾನ ನವೀಕರಣಕ್ಕೆ ಮಾತ್ರ ನೆರವು ನೀಡಲಾಗುತ್ತಿದೆಯೇ ಹೊರತು, ಹೊಸ ಶಸ್ತ್ರಾಸ್ತ್ರಗಳನ್ನು, ಉಪಕರಣಗಳನ್ನು ನೀಡಲಾಗುತ್ತಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Queen Elizabeth | ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಯುಎಸ್​ ಅಧ್ಯಕ್ಷ ಬೈಡೆನ್​

Exit mobile version