ಅರುಣಾಚಲ ಪ್ರದೇಶದಲ್ಲಿ 11 ಸ್ಥಳಗಳಿಗೆ ಮರುನಾಮಕರಣ ಮಾಡಿ, ಈ 11 ಸ್ಥಳಗಳನ್ನು ಒಳಗೊಂಡ ಒಟ್ಟಾರೆ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಪ್ರತಿಪಾದಿಸಿದ ಚೀನಾಕ್ಕೆ ಭಾರತ ಖಡಕ್ ತಿರುಗೇಟು ಕೊಟ್ಟಿದೆ. ‘ನೀವು ಹೀಗೆಲ್ಲ ಏಕಪಕ್ಷೀಯವಾಗಿ ಏನೇನೋ ನಿರ್ಧಾರ ತೆಗೆದುಕೊಂಡು, ಸ್ಥಳಗಳ ಹೆಸರು ಬದಲು ಮಾಡಿದಾಕ್ಷಣ ಏನೂ ಪ್ರಯೋಜನವಿಲ್ಲ. ಅರುಣಾಚಲ ಪ್ರದೇಶ (Arunachal Pradesh)ದ ಪ್ರತಿಪ್ರದೇಶವೂ ಭಾರತದ್ದೇ, ಈ ಈಶಾನ್ಯ ರಾಜ್ಯ ಸಂಪೂರ್ಣವಾಗಿ ಭಾರತಕ್ಕೆ ಸೇರಿದ್ದು ಎಂಬ ವಾಸ್ತವವನ್ನು ಬದಲಿಸಲು ನಿಮ್ಮಿಂದ ಸಾಧ್ಯವೇ ಇಲ್ಲ’ ಎಂದು ಚೀನಾಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದೆ.
ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ದ್ವಿಪಕ್ಷೀಯ ಸಂಬಂಧವೂ ಹಳಸಿದೆ. 2020ರ ಜೂನ್ನಲ್ಲಿ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಹೊಡೆದಾಟ ಆಗಿ ಭಾರತೀಯ ಸೇನೆಯ 20 ಯೋಧರು ಮೃತಪಟ್ಟಿದ್ದರು. ಆ ಸಂಘರ್ಷವಾದ ನಂತರ ಚೀನಾ ಪದೇಪದೇ ವಾಸ್ತವ ಗಡಿ ರೇಖೆ ಬಳಿ ಕಾಲುಕೆದರಿ ಜಗಳಕ್ಕೆ ಬರುತ್ತಿದೆ. ಅರುಣಾಚಲ ಪ್ರದೇಶದ ಗಡಿಯ ಸಮೀಪ ಹಳ್ಳಿಗಳು, ರಸ್ತೆಗಳ ನಿರ್ಮಾಣವನ್ನು ಹೆಚ್ಚಿಸುತ್ತಿದೆ. ಮೂಲ ಸೌಕರ್ಯ ಅಭಿವೃದ್ಧಿ ಮಾಡುತ್ತಿದೆ. ಈ ಹಿಂದೆ 2017ರಲ್ಲಿ 6 ಮತ್ತು 2021ರಲ್ಲಿ 15 ಪ್ರದೇಶಗಳ ಹೆಸರನ್ನು ಬದಲಿಸಿದ್ದಾಗಿ ಹೇಳಿತ್ತು. ಆಗಲೂ ಕೂಡ ಭಾರತ ಇದೇ ಮಾತನ್ನೇ ಹೇಳಿತ್ತು.
ಇದನ್ನೂ ಓದಿ: ಕುತಂತ್ರಿ ಡ್ರ್ಯಾಗನ್ ರಾಷ್ಟ್ರ; ಅರುಣಾಚಲ ಪ್ರದೇಶದಲ್ಲಿ 11 ಸ್ಥಳಗಳ ಹೆಸರು ಬದಲಿಸಿ, ಇದು ದಕ್ಷಿಣ ಟಿಬೆಟ್ ಎಂದ ಚೀನಾ!
ಇದೀಗ ಅರುಣಾಚಲ ಪ್ರದೇಶದಲ್ಲಿ ಎರಡು ಭೂಪ್ರದೇಶಗಳು, ಎರಡು ವಸತಿ ಪ್ರದೇಶಗಳು, ಐದು ಗುಡ್ಡಪ್ರದೇಶ ಮತ್ತು ಎರಡು ನದಿಗಳಿಗೆ ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಮರುನಾಮಕರಣ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಭಾರತ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ‘ಚೀನಾ ಅರುಣಾಚಲ ಪ್ರದೇಶದಲ್ಲಿ 11 ಪ್ರದೇಶಗಳ ಹೆಸರು ಬದಲಿಸಿದ್ದ ವರದಿ ನಮಗೂ ಬಂದಿದೆ. ಆ ದೇಶ ಹೀಗೆಲ್ಲ ಮಾಡಿದ್ದು ಇದು ಮೊದಲೇನೂ ಅಲ್ಲ. ಅರುಣಾಚಲ ಪ್ರದೇಶ ಈ ಹಿಂದೆ, ಈಗ ಮತ್ತು ಮುಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ. ಅದನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ. ಚೀನಾ ಏನೇ ಮಾಡಿದರೂ ವಾಸ್ತವ ಬದಲಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.