ನವದೆಹಲಿ: ಭಾರತವು ವಿದೇಶಿ ಮೂಲದ ಎನ್‌ಜಿಒ ಸಿದ್ಧಪಡಿಸಿದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಮತ್ತು ರಾಷ್ಟ್ರಗಳ ಸ್ಥಾನಮಾನ ಕುರಿತ ವರದಿಗಳನ್ನು ಅಂಗೀಕರಿಸುವುದಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ ಎಂಬ ಎನ್‌ಜಿಒ ಕಳೆದ ಮೇನಲ್ಲಿ ಬಿಡುಗಡೆ ಮಾಡಿರುವ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ೧೪೨ರಿಂದ ೧೫೦ನೇ ಸ್ಥಾನಕ್ಕೆ ಕುಸಿದಿತ್ತು. ಈ ಬಗ್ಗೆ ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಾಲಾ ರಾಯ್, ಡಿಎಂಕೆ ಸಂಸದ ಎ.ರಾಜಾ ಮತ್ತು ಎ ಗಣೇಶ ಮೂರ್ತಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಠಾಕೂರ್, ” ವಿದೇಶಿ ಮೂಲದ ಎನ್‌ಜಿಒ ಒಂದರ ದೃಷ್ಟಿಕೋನ, ಸೂಚ್ಯಂಕಗಳನ್ನು ಸರ್ಕಾರ ಒಪ್ಪುವುದಿಲ್ಲ. ಎನ್‌ಜಿಒಗಳ ಇಂಥ ಸಮೀಕ್ಷೆಗಳ ಮಿತಿ ಸೀಮಿತವಾಗಿರುತ್ತದೆ. ಪಾರದರ್ಶಕವೂ ಆಗಿರುವುದಿಲ್ಲ. ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಇದು ವಿರುದ್ಧವಾಗಿರುತ್ತದೆʼʼ ಎಂದು ಅನುರಾಗ್ ಠಾಕೂರ್ ಹೇಳಿದರು.
೧೮೦ ರಾಷ್ಟ್ರಗಳ ಪೈಕಿ ಭಾರತ ಅತ್ಯಂಕ ಕಳಪೆ ಪತ್ರಿಕಾ ಸ್ವಾತಂತ್ರ್ಯ ಇರುವ ೩೦ ರಾಷ್ಟ್ರಗಳಲ್ಲಿ ಸೇರಿದೆಯೇ ಎಂದು ಪ್ರತಿಪಕ್ಷ ಸಂಸದರು ಎನ್‌ಜಿಒದ ಸಮೀಕ್ಷೆಯನ್ನು ಉಲ್ಲೇಖಿಸಿ ಪ್ರಶ್ನಿಸಿದ್ದರು.
ಸರ್ಕಾರ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಸ್ವಾಯತ್ತ ಸಂಸ್ಥೆಯಾಗಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಸಂರಕ್ಷಿಸಲು ಮತ್ತು ಸುಧಾರಿಸಲು ಕಾರ್ಯನಿರ್ವಹಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯ ಕುರಿತ ಅಹವಾಲುಗಳನ್ನು , ಪತ್ರಕರ್ತರ ಮೇಲೆ ಹಲ್ಲೆ, ದಾಳಿ ಇತ್ಯಾದಿ ಪ್ರಕರಣಗಳನ್ನು ಪಿಸಿಐ ಪರಿಗಣಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಸಂಬಂಧಿಸಿ ಪಿಸಿಐ ಸ್ವಯಂಪ್ರೇರಣೆಯಿಂದಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು ಎಂದರು.