Site icon Vistara News

ದೇಶದಲ್ಲಿ ಮತ್ತೆ ಕೊರೊನಾರ್ಭಟ, ಒಂದೇ ದಿನ ಹೊಸದಾಗಿ 8,822 ಕೊರೊನಾ ಪ್ರಕರಣ ಪತ್ತೆ

Corona Virus

ನವದೆಹಲಿ : ಕೊಂಚ ಬ್ರೇಕ್‌ ಕೊಟ್ಟಿದ್ದ ಕೊರೊನಾ ಈಗ ಮತ್ತೆ ತನ್ನ ಆರ್ಭಟವನ್ನು ಶುರು ಮಾಡಿಕೊಂಡಿದೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು (ಬುಧವಾರ) ಒಂದೇ ದಿನದಲ್ಲಿ 8,822 ಹೊಸದಾದ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಕಳೆದ ಮೂರು ತಿಂಗಳಲ್ಲೇ ಅತಿಹೆಚ್ಚು ದಾಖಲಾದ ಪ್ರಕರಣ ಇದಾಗಿದೆ.

ನಿನ್ನೆ (ಮಂಗಳವಾರ) 6,594 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. (ಜೂನ್‌ 13) ಸೋಮವಾರ 8,084 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ ಎರಡು ದಿನಗಳಿಗಿಂತ ಇಂದು (ಬುಧವಾರ) ಹೆಚ್ಚು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ದೇಶದಲ್ಲಿ ಒಟ್ಟಾರೆ 4,32,45,517 ಕೊರೊನಾ ಪ್ರಕರಣಗಳಿದ್ದು, ಕಳೆದ 24 ಗಂಟೆಯಲ್ಲಿ 15 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾದಿಂದ ಸಾವನ್ನಪ್ಪಿದ್ದವರ ಸಂಖ್ಯೆ 5,24,792ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ 53,637 ಸಕ್ರಿಯ ಪ್ರಕರಣಗಳಿದ್ದು, ನಿನ್ನೆ ಒಂದೇ ದಿನದಲ್ಲಿ 5,718 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್‌ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನು ಓದಿ| Covid news | ಹೆಚ್ಚಾಗುತ್ತಿದೆ ಕೊರೊನಾ, ಮಕ್ಕಳಿಗೆ ಕೋವಿಡ್‌ ಬಂತೆಂದು ಬೆಂಗಳೂರಿನ 2 ಶಾಲೆಗಳಿಗೆ ರಜೆ

ಮಹಾರಾಷ್ಟ್ರ, ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಕಳೆದ 24 ಗಂಟೆಯಲ್ಲೇ ದೆಹಲಿಯಲ್ಲಿ 1,118 ಹೊಸದಾದ ಪ್ರಕರಣಗಳು ದಾಖಲಾಗಿವೆ, ಮಹಾರಾಷ್ಟ್ರದಲ್ಲಿ 2,956 ಕೊರೊನಾ ಪ್ರಕರಣ ದಾಖಲಾಗಿದೆ. ಉಳಿದಂತೆ ತಮಿಳುನಾಡು, ಗೋವಾ, ಪಶ್ಚಿಮ ಬಂಗಾಳ, ತೆಲಂಗಾಣ, ಗುಜರಾತ್‌ ಮತ್ತು ಆಂಧ್ರಪ್ರದೇಶದಲ್ಲಿ ಪ್ರತಿದಿನ 200 ರಿಂದ 300 ಹೊಸ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ.

ಕೊರೊನಾ ಹೆಚ್ಚಳವಾಗುತ್ತಿರುವ ಹೊತ್ತಿನಲ್ಲೇ ಲಸಿಕೆ ಅಭಿಯಾನವನ್ನು ಸಹ ಮತ್ತೆ ಚುರುಕುಗೊಳಿಸಲಾಗಿದೆ. ಈವರೆಗೆ ದೇಶದಲ್ಲಿ 195.5 ಕೋಟಿ ಲಸಿಕೆಯನ್ನು ನೀಡಲಾಗಿದೆ. 12 ರಿಂದ 14 ವರ್ಷದ 3.53 ಕೋಟಿ ಮಂದಿಗೆ ಫಸ್ಟ್‌ ಡೋಸ್‌ ನೀಡಲಾಗಿದ್ದು, 1.99 ಕೋಟಿ ಮಂದಿಗೆ‌ ಎರಡನೇ ಡೋಸ್ ನೀಡಲಾಗಿದೆ. 15 ರಿಂದ 18 ವರ್ಷದ 5.99 ಕೋಟಿ ಫಸ್ಟ್‌ ಡೋಸ್‌ ನೀಡಲಾಗಿದ್ದು, 4.72 ಕೋಟಿ ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಉಳಿದಂತೆ 60 ವರ್ಷ ಮೇಲ್ಪಟ್ಟ 3.61 ಕೋಟಿ ಜನರಿಗೆ ಬೂಸ್ಟರ್‌ ಡೋಸ್‌ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನು ಓದಿ| ಇದು ಕೊರೊನಾ ನಾಲ್ಕನೇ ಅಲೆ ಅಲ್ಲ, ಆದರೆ ಹುಷಾರಾಗಿರಿ ಎಂದ ಸರ್ಕಾರ

Exit mobile version