Site icon Vistara News

UPI In Other Countries: ಜಾಗತಿಕ ಡಿಜಿಟಲ್‌ ಆರ್ಥಿಕತೆಗೆ ಭಾರತದ ಯುಪಿಐ ನೇತೃತ್ವ, ಶೀಘ್ರವೇ 13 ದೇಶಕ್ಕೆ UPI ವಿಸ್ತರಣೆ

UPI

ಲಖನೌ: ಸುರಕ್ಷಿತವಾಗಿ ಡಿಜಿಟಲ್‌ ಪಾವತಿ, ವಹಿವಾಟಿಗಾಗಿ ಭಾರತದಲ್ಲಿ ಅಳವಡಿಸಿಕೊಂಡಿರುವ ಏಕೀಕೃತ ಪಾವತಿ ವ್ಯವಸ್ಥೆಗೆ (Unified Payment Interface-UPI) ಜಾಗತಿಕ ಮನ್ನಣೆ ದೊರೆತಿದೆ. ಆನ್‌ಲೈನ್‌ ಮೂಲಕ ಸುರಕ್ಷಿತವಾಗಿ ಹಣ ವರ್ಗಾವಣೆ ಮಾಡಬಹುದಾದ ಕಾರಣ ಯುಪಿಐಅನ್ನು ಈಗಾಗಲೇ ಹಲವು ರಾಷ್ಟ್ರಗಳು ಅಳವಡಿಸಿಕೊಂಡಿವೆ. ಇದರ ಬೆನ್ನಲ್ಲೇ, ಶೀಘ್ರದಲ್ಲಿಯೇ ಇನ್ನೂ ೧೩ ರಾಷ್ಟ್ರಗಳು (UPI In Other Countries) ಯುಪಿಐಅನ್ನು ಅಳವಡಿಸಿಕೊಳ್ಳಲಿವೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.

ಉತ್ತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಜಾಗತಿಕ ಡಿಜಿಟಲ್‌ ಆರ್ಥಿಕ ವ್ಯವಸ್ಥೆಗೆ ಭಾರತದ ಕೊಡುಗೆ ಹೆಚ್ಚಾಗುತ್ತಿದೆ. ಭಾರತದ ಯುಪಿಐ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ೧೩ ರಾಷ್ಟ್ರಗಳು ಒಡಂಬಡಿಕೆ ಮಾಡಿಕೊಂಡಿವೆ. ಮೊದಲು ಸಿಂಗಾಪುರದಲ್ಲಿ ಯುಪಿಐ ಜಾರಿಗೆ ಬರಲಿದೆ. ನಂತರ ಬೇರೆ ರಾಷ್ಟ್ರಗಳು ಕೂಡ ಅಳವಡಿಸಿಕೊಳ್ಳಲಿವೆ” ಎಂದು ಮಾಹಿತಿ ನೀಡಿದರು.

ಜಾಗತಿಕ ಟೆಕ್‌ ಸಂಸ್ಥೆ ಗೂಗಲ್‌ ಕೂಡ ತನ್ನ ಪೇಮೆಂಟ್‌ ವ್ಯವಸ್ಥೆಯನ್ನು ಬಿಟ್ಟು, ಯುಪಿಐಅನ್ನು ಅಳವಡಿಸಿಕೊಂಡಿದೆ. ಅಲ್ಲದೆ, ಭಾರತದ ಯುಪಿಐ ಕುರಿತು ಅಮೆರಿಕದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ. ಎರಡು ರೂಪಾಯಿಯಿಂದ ಎರಡು ಲಕ್ಷ ರೂಪಾಯಿವರೆಗೆ ಯುಪಿಐ ಮೂಲಕ ವರ್ಗಾವಣೆ ಮಾಡಬಹುದಾದ ಕಾರಣ ಜಾಗತಿಕವಾಗಿ ಯುಪಿಐ ಕುರಿತು ಉತ್ತಮ ಅಭಿಪ್ರಾಯವಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಕಳೆದ ವಿತ್ತೀಯ ವರ್ಷದಲ್ಲಿ ಯುಪಿಐ ಮೂಲಕ ೧೨೬ ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ.

ಇದನ್ನೂ ಓದಿ: PhonePe : ಫೋನ್‌ಪೇ ಬಳಕೆದಾರರು ಈಗ ವಿದೇಶಗಳಲ್ಲೂ ಯುಪಿಐ ಮೂಲಕ ಪೇಮೆಂಟ್‌ ಮಾಡಬಹುದು: ಕಂಪನಿ ಘೋಷಣೆ

Exit mobile version