ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ತೆರಳಿ, ವಿಶೇಷ ಆತಿಥ್ಯ ಸ್ವೀಕರಿಸಿ, ಸಂಸತ್‌ನಲ್ಲಿ ಭಾಷಣ ಮಾಡಿ, ಡ್ರೋನ್ ಖರೀದಿಗೆ ಒಪ್ಪಂದವನ್ನೂ ಮಾಡಿಕೊಂಡ ಭಾರತಕ್ಕೆ ಬೇರೆ ದೇಶಗಳಿಗಿಂತ ಶೇ.27ರಷ್ಟು ಕಡಿಮೆ ಬೆಲೆಯಲ್ಲಿ ಎಂಕ್ಯೂ-9ಬಿ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು (MQ-9B Drones) ನೀಡಲು ಅಮೆರಿಕ ಒಪ್ಪಿದೆ. ಇದು ಭಾರತ ಹಾಗೂ ಅಮೆರಿಕ ನಡುವಿನ ಉತ್ತಮ ಬಾಂಧವ್ಯ ಹಾಗೂ ಮೋದಿ ಭೇಟಿ ಪರಿಣಾಮ ಎಂದೇ ಹೇಳಲಾಗುತ್ತಿದೆ.
ಭಾರತವು ಅಮೆರಿಕದಿಂದ 31 ಎಂಕ್ಯೂ-9ಬಿ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಖರೀದಿಸಲು ಉದ್ದೇಶಿಸಲಿದೆ. ಅಮೆರಿಕವು ಬೇರೆ ದೇಶಗಳಿಗೆ ಒಂದು ಎಂಕ್ಯೂ-9ಬಿ ಶಸ್ತ್ರಸಜ್ಜಿತ ಡ್ರೋನ್‌ಗೆ 161 ದಶಲಕ್ಷ ಡಾಲರ್ (1,320 ಕೋಟಿ ರೂಪಾಯಿ) ಪಡೆದಿದೆ. ಆದರೆ, ಭಾರತಕ್ಕೆ ಶೇ.27ರಷ್ಟು ಡಿಸ್ಕೌಂಟ್ ನೀಡಲು ಅಮೆರಿಕ ಮುಂದಾಗಿದೆ. ಅಂದರೆ, ಭಾರತಕ್ಕೆ ಒಂದು ಡ್ರೋನ್‌ಗೆ 99 ದಶಲಕ್ಷ ಡಾಲರ್ (812 ಕೋಟಿ ರೂಪಾಯಿ) ನಿಗದಿಪಡಿಸಿದೆ. ಅಂದರೆ ಭಾರತಕ್ಕೆ ಒಂದು ಡ್ರೋನ್‌ನಿಂದ 508 ಕೋಟಿ ರೂಪಾಯಿಯಂತೆ 31 ಡ್ರೋನ್‌ಗಳಿಂದ 15,748 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಅಮೆರಿಕದ ಜತೆ ಭಾರತ ಮಾಡಿಕೊಂಡ ಡ್ರೋನ್ ಖರೀದಿ ಒಪ್ಪಂದ, ಅವುಗಳ ಬೆಲೆ ಕುರಿತು ಕೇಂದ್ರ ಸರ್ಕಾರದ ಮೂಲಗಳೇ ಮಾಹಿತಿ ನೀಡಿವೆ. ಭಾರತ ಖರೀದಿಸಲು ಮುಂದಾಗಿರುವ ಡ್ರೋನ್‌ಗಳು 27 ಗಂಟೆಗಳಿಗಿಂತಲೂ ಅಧಿಕ ಕಾಲ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಅಲ್ಲದೇ 50 ಸಾವಿರ ಅಡಿಗಳ ಎತ್ತರ ಹಾರಾಟ ಮಾಡಬಲ್ಲವು. ಡ್ರೋನ್ ಖರೀದಿ ಒಪ್ಪಂದದಿಂದ ಗಡಿಯಲ್ಲಿ ಭಾರತವು ಚೀನಾ ಹಾಗೂ ಪಾಕಿಸ್ತಾನದ ಮೇಲೆ ನಿಗಾ ಇಡುವ, ಎಂತಹದ್ದೇ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಲಿದೆ.
ಇದನ್ನೂ ಓದಿ: PM Modi Visit US: ಮೋದಿ ಅಮೆರಿಕ ಪ್ರವಾಸದ ಎಫೆಕ್ಟ್, ಅಗ್ಗವಾಗಲಿವೆ ಕಡಲೆ, ಬೇಳೆಕಾಳು, ಸೇಬು!
ಈ ಡ್ರೋನ್‌ಗಳ ಖರೀದಿಗೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ಕಳೆದ ಎಂಟು ವರ್ಷಗಳಿಂದ ಮಾತುಕತೆಯಲ್ಲಿ ನಿರತವಾಗಿದ್ದವು. ಭಾರತೀಯ ಶಸ್ತ್ರಾಸ್ತ್ರ ಪಡೆಗಳ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲು ಈ ಡ್ರೋನ್‌ಗಳು ಅಗತ್ಯವಾಗಿವೆ. ಸದ್ಯ ಭಾರತೀಯ ನೌಕಾ ಪಡೆಯಲು ಗುತ್ತಿಗೆ ಆಧಾರದ ಮೇಲೆ 2020ರಿಂದ ಅಮೆರಿಕ ಎರಡು ಎಂಕ್ಯೂ-9 ಡ್ರೋನ್‌ಗಳನ್ನು ಬಳಸುತ್ತಿದೆ. ನರೇಂದ್ರ ಮೋದಿ ಅವರು ಜೂನ್ 20ರಿಂದ 24ರವರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ, ಜೋ ಬೈಡೆನ್ ಅವರು ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿದ್ದರು. ಅನಿವಾಸಿ ಭಾರತೀಯರ ಜತೆಗೂ ಮೋದಿ ಮಾತುಕತೆ ನಡೆಸಿದ್ದರು.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ