ನವದೆಹಲಿ: ದೇಶದ ಹಲವೆಡೆ ಉತ್ತಮ ಮಳೆಯಾಗುವ ಮೂಲಕ ಧರೆ ತಂಪಾಗಿದೆ. ಸೂರ್ಯನ ಪ್ರತಾಪ ಕಡಿಮೆಯಾಗುತ್ತಿದೆ. ರೈತರು ಭೂಮಿ ಹದಗೊಳಿಸಿ, ಬಿತ್ತನೆಗೆ ಸಿದ್ಧವಾಗುವ ಲೆಕ್ಕದಲ್ಲಿದ್ದಾರೆ. ಇದರ ಮಧ್ಯೆಯೇ, ಮುಂಗಾರು ಮಳೆಯ (Mansoon 2023) ಪ್ರವೇಶ, ಮಳೆಯಾಗುವ ಪ್ರಮಾಣದ ಕುರಿತು ಹವಾಮಾನ ಇಲಾಖೆ ವರದಿ ನೀಡಿದೆ. ಈ ಬಾರಿ ಮೂರು ದಿನ ವಿಳಂಬವಾಗಿ ಅಂದರೆ, ಜೂನ್ 4ರಂದು ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ ಈ ಬಾರಿ ರೈತರಿಗೆ ಸಿಹಿ ಸುದ್ದಿ ಕಾದಿದೆ. ದೇಶದ ಬಹುತೇಕ ಭಾಗದಲ್ಲಿ ಈ ಬಾರಿ ಶೇ.96ರಷ್ಟು ವಾಡಿಕೆಯಷ್ಟು ಮಳೆಯಾಗಲಿದೆ. ವಾಯವ್ಯ ಭಾರತದ ಹಲವೆಡೆ ಮಾತ್ರ ಶೇ.92ರಷ್ಟು ವಾಡಿಕೆಯಷ್ಟು ಮಳೆಯಾಗಲಿದೆ. ಹಾಗಾಗಿ, ಹವಾಮಾನ ಇಲಾಖೆ ವರದಿಯು ರೈತರಲ್ಲಿ ನಿರಾಳ ಭಾವ ಮೂಡಿಸಿದೆ.
Once the monsoon will get established strong, we are expecting the monsoon to arrive in Kerala around 4th June. Before 1st June, we are not expecting monsoon to arrive. Monsoon most likely to be normal this year: IMD pic.twitter.com/9YlMw903g3
— ANI (@ANI) May 26, 2023
ಜೂನ್ ತಿಂಗಳಲ್ಲಿ ವಾಡಿಕೆಗಿಂತ ತುಸು ಕಡಿಮೆ ಮಳೆಯಾಗಲಿದೆ. ಜೂನ್‌ನಲ್ಲಿ ದಕ್ಷಿಣ ಭಾರತದ ಹಲವೆಡೆ ವಾಡಿಕೆಗಿಂತ ಕಡಿಮೆ ಮಳೆಯಾದರೆ, ಉತ್ತರ ಭಾರತದಲ್ಲಿ ವಾಡಿಕೆಗಿಂತ ಹೆಚ್ಚು ವರುಣನ ಆರ್ಭ ಇರಲಿದೆ ಎಂದು ಹವಾಮಾನ ಇಲಾಖೆಯ ಪರಿಸರ ನಿಗಾ ಸಂಶೋಧನಾ ಕೇಂದ್ರ (EMRC)ದ ಮುಖ್ಯಸ್ಥ ಡಿ. ಶಿವಾನಂದ ಪೈ ಮಾಹಿತಿ ನೀಡಿದರು.
ಇದನ್ನೂ ಓದಿ: Rain News: ಮಂಡ್ಯದಲ್ಲಿ ಸಿಡಿಲು ಬಡಿದು ಜಾನುವಾರು ಸಾವು; ಗಾಳಿ ಮಳೆಗೆ ಮನೆ ಚಾವಣಿ, ಗೋಡೆ ಕುಸಿತ
“ಮುಂಗಾರಿನ ತೀವ್ರತೆ ಜಾಸ್ತಿಯಾಗುತ್ತಲೇ ಅಂದರೆ, ಜೂನ್ 4ರಂದು ಮುಂಗಾರು ಕೇರಳ ಪ್ರವೇಶಿಸಲಿದೆ. ಜೂನ್ 1ರಂದು ಮುಂಗಾರು ಪ್ರವೇಶದ ಸಾಧ್ಯತೆ ತುಂಬ ಕಡಿಮೆ ಇದೆ. ನೈಋತ್ಯ ಮುಂಗಾರು ಕೂಡ ವಾಡಿಕೆಯಷ್ಟೇ ಇರಲಿದೆ. ಮುಂದಿನ ವಾರದವರೆಗೆ ಅರಬ್ಬೀ ಸಮುದ್ರದಲ್ಲಿ ಯಾವುದೇ ಚಂಡಮಾರುತದ ಸುಳಿವಿಲ್ಲ. ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯವಾಗಿ ಮುಂಗಾರು ಪ್ರವೇಶವಾದರೆ ಚಂಡಮಾರುತದ ಪರಿಣಾಮ ಬೀರುವುದಿಲ್ಲ. ಚಂಡಮಾರುತದ ಸುಳಿವಿಲ್ಲದ ಕಾರಣ ತೊಂದರೆಯಾಗುವುದಿಲ್ಲ” ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.