Site icon Vistara News

Kamikaze Drones : ಸ್ವಾತಂತ್ರ್ಯೋತ್ಸವದ ಸಂಭ್ರಮದ ನಡುವೆ ಸ್ವದೇಶಿ ನಿರ್ಮಿತ ಬಾಂಬರ್​​ ಡ್ರೋನ್​ ಸಿದ್ಧಪಡಿಸಿದ ಭಾರತ

Kamikaze Drones

ನವದೆಹಲಿ: ಭಾರತ 78 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಸಿದ್ಧಗೊಳ್ಳುತ್ತಿದೆ. ಇದೇ ವೇಳೆ ಭಾರತ ತನ್ನ ರಕ್ಷಣಾ ವಲಯದಲ್ಲಿ ಅತ್ಯುತ್ತಮ ಸಾಧನೆಯೊಂದನ್ನು ಮಾಡಿದೆ. ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್ಎಎಲ್) ಸ್ವದೇಶಿ ನಿರ್ಮಿತ ಕಮಿಕಾಜೆ ಡ್ರೋನ್​ಗಳನ್ನು (ಸ್ಫೋಟಗೊಳ್ಳುವ ಡ್ರೋನ್​ಗಳು) ನಿರ್ಮಿಸಿದೆ (Kamikaze Drones). ಇದು ಅತ್ಯಂತ ಅಪಾಯಕಾರಿ ಡ್ರೋನ್ ಆಗಿದ್ದು ಎದುರಾಳಿಯನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡು ಸ್ಫೋಟಗೊಳ್ಳುವ ಆತ್ಮಾಹುತಿ ಬಾಂಬರ್ ಆಗಿದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಇಂಥ ಡ್ರೋನ್​ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇಂಥ ಡ್ರೋನ್​ಗಳು ಇನ್ನು ಭಾರತದ ಸೇನೆಯನ್ನೂ ಸೇರಲಿದೆ. ಹೆಚ್ಚು ಶಕ್ತಿಯುತವಾದ ಈ ಯುದ್ದ ಉಪಕರಣದ ಸೇರ್ಪಡೆಯುವ ಭಾರತದ ಶಕ್ತಿಯನ್ನು ಹೆಚ್ಚಿಸಲಿದೆ.

ಇದನ್ನೂ ಓದಿ : ಸೆಬಿ ಅಧ್ಯಕ್ಷರ ವಜಾಗೆ ಆಗ್ರಹಿಸಿದ ಕಾಂಗ್ರೆಸ್​ನಿಂದ ಆಗಸ್ಟ್​​ 22ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ

ಕಮಿಕಾಜೆ ಮಾನವರಹಿತ ವೈಮಾನಿಕ ಡ್ರೊನ್​​ಗಳನ್ನು ರಷ್ಯಾದ ಸೈನಿಕರು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಗುರಿಯಾಗಿಸಿ ಉಕ್ರೇನಿಯನ್ನರು ಈಗ ಬಳಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಉಕ್ರೇನ್​ ಪಡೆ ಈ ರೀತಿಯ ದಾಳಿಯನ್ನು ಮಾಡಿರುವುದು ವರದಿಯಾಗಿದೆ. ಈ ಡ್ರೋನ್​ ಗುರಿಯನ್ನು ಹುಡುಕಿಕೊಂಡು ಹೆಚ್ಚು ಹೊತ್ತು ಅಲೆದಾಡುತ್ತದೆ. ಸ್ಫೋಟಕಗಳನ್ನು ಒತ್ತೊಯ್ಯುವ ಈ ಡ್ರೋನ್​ ದೂರದಲ್ಲಿ ಕುಳಿತಿರುವ ನಿಯಂತ್ರಕರಿಂದ ಆದೇಶ ಪಡೆದು ಆತ್ಮಾಹುತಿ ದಾಳಿಕೋರನಾಗುತ್ತದೆ. ಇಂಥ ಡ್ರೋನ್​​ಗಳನ್ನು ಹಿಂಡುಗಳಂತೆಯೂ ಕಳುಹಿಸಬಹುದು. ಇದರ ಲಾಭವೇನೆಂದರೆ ಅನೇಕ ಡ್ರೋನ್​ಗಳು ಏಕಾಕಾಲಕ್ಕೆ ದಾಳಿ ಮಾಡುವಾಗ ಶತ್ರು ಪಡೆಯ ರಾಡಾರ್​ಗಳ ಕಣ್ತಪ್ಪಿಸಬಹುದು. ಇಂಥ ಡ್ರೋನ್​ಗಳಿಗೂ ಪ್ರತ್ಯಸ್ತ್ರವನ್ನೂ ಇಸ್ರೇಲ್​ನಂಥ ದೇಶಗಳು ಹೊಂದಿವೆ. ಆದಾಗ್ಯೂ ತಪ್ಪಿಸಿಕೊಂಡ ಕೆಲವು ಶತ್ರುಗಳ ಸಾಮರ್ಥ್ಯ ಕುಗ್ಗಿಸಬಹುದು.

ಕಮಿಕಾಜೆ ಆತ್ಮಹತ್ಯಾ ಕಾರ್ಯಾಚರಣೆಗಳನ್ನು ಮೊದಲ ಬಾರಿಗೆ ಎರಡನೇ ಮಹಾಯುದ್ಧದ ಕೊನೆಯಲ್ಲಿ ಪ್ರಯೋಗಗೊಂಡಿತು. ಜಪಾನಿನ ವಾಯುಪಡೆಯು ಪೈಲಟ್​ಗಳ ಸಂಖ್ಯೆ ಕಡಿಮೆಯಾದ ಬಳಿಕ ತಮ್ಮ ಯುದ್ಧ ವಿಮಾನಗಳನ್ನು ಶತ್ರು ರಾಷ್ಟ್ರಗಳ ವಿಮಾನಗಳು ಮತ್ತು ಹಡಗುಗಳ ಮೇಲೆ ಬೀಳಿಸಿ ಸ್ಫೋಟಿಸುವಂತೆ ಮಾಡುತ್ತಿದ್ದರು.

ಸ್ವದೇಶಿ ಕಮಿಕಾಜೆ ಡ್ರೋನ್​ ಸಂಶೋಧನೆಯ ನೇತೃತ್ವ ವಹಿಸಿರುವ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್​​ನ ನಿರ್ದೇಶಕ ಡಾ.ಅಭಯ್ ಪಾಶಿಲ್ಕರ್ ಮಾಹಿತಿ ನೀಡಿ “ಭಾರತವು ಈ ಸಂಪೂರ್ಣ ದೇಶೀಯ ಕಮಿಕಾಜೆ ಡ್ರೋನ್​​ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು 21 ನೇ ಶತಮಾನದ ಹೊಸ ಯುಗದ ಯುದ್ಧ ತಂತ್ರಕ್ಕೆ ಅಗತ್ಯವಾಗಿದೆ ” ಎಂದು ಹೇಳುತ್ತಾರೆ.

ಭಾರತದ ಡ್ರೋನ್ ಸಾಮರ್ಥ್ಯವೇನು?

ಭಾರತೀಯ ಕಮಿಕಾಜೆ ಡ್ರೋನ್ ಸುಮಾರು 2.8 ಮೀಟರ್ ಉದ್ದವಿರುತ್ತದೆ. 3.5 ಮೀಟರ್ ಅಗಲದ ರೆಕ್ಕೆಗಳನ್ನು ಹೊಂದಿದೆ. ಒಟ್ಟಾರೆ ಸುಮಾರು 120 ಕೆಜಿ ತೂಕ ಹೊಂದಿರುವ ಈ ಡ್ರೋನ್​ 25 ಕೆ.ಜಿ ಸ್ಫೋಟಕಗಳನ್ನು ಹೊತ್ತೊಯ್ಯುತ್ತಿದೆ.

ಸಂಶೋಧನಾ ತಂಡದ ಡಾ.ಪಾಶಿಲ್ಕರ್ ಮಾತನಾಡಿ, ಭಾರತದ ಈ ಅಲೆಮಾರಿ ಶಸ್ತ್ರಾಸ್ತ್ರಗಳು ಸುಮಾರು ಒಂಬತ್ತು ಗಂಟೆಗಳ ಹಾರಾಟ ಸಾಮರ್ಥ್ಯ ಹೊಂದಿರುತ್ತವೆ, ಅಂದರೆ ಒಮ್ಮೆ ಉಡಾವಣೆಯಾದ ನಂತರ ಅದು ಅಗತ್ಯವಾಗಿರು ಕ್ಷೇತ್ರದಲ್ಲಿ ನಿರಂತರವಾಗಿ ಹಾರಬಹುದು. ಗುರಿಯನ್ನು ಗುರುತಿಸಿದ ನಂತರ ನಿಯಂತ್ರಕ ಅನುಮತಿಯ ನಂತರ ‘ಡು ಆರ್​ ಡೈ ಡ್ರೋನ್ ಅನ್ನು ತನ್ನ ಆತ್ಮಹತ್ಯೆ ಕಾರ್ಯಾಚರಣೆ ಆರಂಭಿಸುತ್ತದೆ.

ಸಿಎಸ್ಐಆರ್-ಎನ್ಎಎಲ್ ಅನ್ನು ನೋಡಲ್ ಪ್ರಯೋಗಾಲಯವಾಗಿ ಮತ್ತು ಸಿಎಸ್ಐಆರ್​​ನ ಎಲ್ಲಾ ಪ್ರಮುಖ ಎಂಜಿನಿಯರಿಂಗ್ ಪ್ರಯೋಗಾಲಯಗಳಲ್ಲಿ ಕಮಿಕಾಜೆ ಡ್ರೋನ್​​ಗಳ ಯೋಜನೆ ಪ್ರಾರಂಭಿಸಲು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ತಾತ್ವಿಕ ಅನುಮೋದನೆ ನೀಡಿದೆ. ಈ ಸಾಮರ್ಥ್ಯವು ನಮ್ಮ ರಾಷ್ಟ್ರೀಯ ಭದ್ರತಾ ಅಗತ್ಯಗಳನ್ನು ಪೂರೈಸಲಿದೆ.

ಭಾರತೀಯ ಕಮಿಕಾಜೆ ಡ್ರೋನ್ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ 30-ಅಶ್ವಶಕ್ತಿಯ ವಾಂಕೆಲ್ ಎಂಜಿನ್ ಅನ್ನು ಬಳಸುತ್ತದೆ. ಇದು ಗಂಟೆಗೆ 180 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಾಗುತ್ತದೆ. 1,000 ಕಿಲೋಮೀಟರ್ ನಿರಂತರವಾಗಿ ಹಾರುವ ಸಾಮರ್ಥ್ಯ ಹೊಂದಿದೆ.

ಭಾರತೀಯ ಆವೃತ್ತಿಯು ಜಿಪಿಎಸ್ ಇಲ್ಲದ ಸನ್ನಿವೇಶಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಗುರಿಯನ್ನು ನ್ಯಾವಿಗೇಟ್ ಮಾಡಲು ಮತ್ತು ಹೋಮಿಂಗ್ ಮಾಡಲು ಭಾರತೀಯ ಎನ್ಎವಿಐಸಿಯನ್ನು (NAViC) ಬಳಸಬಹುದಾಗಿದೆ. “ಇತರ ದೇಶಗಳು ನಿಯೋಜಿಸಿದ ಇಂತಹ ಡ್ರೋನ್​​ಗಳು ಬೇರೆಡೆ ನಡೆಯುತ್ತಿರುವ ಆಧುನಿಕ ಯುದ್ಧಗಳಲ್ಲಿ ಹೆಚ್ಚಿನ ಸಾಮರ್ಥ್ಯ ಪ್ರದರ್ಶಿಸಿವೆ ” ಎಂದು ಡಾ.ಪಾಶಿಲ್ಕರ್ ಹೇಳಿದ್ದಾರೆ.

Exit mobile version