ನವದೆಹಲಿ: ಚೀನಾದಲ್ಲಿ ಕೊವಿಡ್ 19 ಅಬ್ಬರ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಭಾರತದಲ್ಲಿ ಕೊರೊನಾ ಸೋಂಕಿನ ಸ್ಥಿತಿಗತಿ ಏನಿದೆ? ಕೊವಿಡ್ 19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆಯಾ? ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯ ಜನರಲ್ಲಿ ಉದ್ಭವ ಆಗಿದೆ. ದೈನಂದಿನ ಕೇಸ್ನಲ್ಲಿ ಅಂಥ ಮಹತ್ವದ ಬದಲಾವಣೆ ಕಾಣದೆ ಇದ್ದರೂ, ಒಂದು ವಾರದ ಲೆಕ್ಕಾಚಾರ ಹಾಕಿದಾಗ ಕಳೆದ ವಾರಕ್ಕಿಂತಲೂ ಈ ವಾರ ಒಟ್ಟಾರೆ ಸೋಂಕಿತರ ಸಂಖ್ಯೆ ಶೇ.11ರಷ್ಟು ಏರಿಕೆಯಾಗಿದೆ.
ಸೋಮವಾರದಿಂದ ಪ್ರಾರಂಭಿಸಿ ಭಾನುವಾರದವರೆಗೆ ದೇಶದಲ್ಲಿ ಎಷ್ಟು ಕೊರೊನಾ ಕೇಸ್ಗಳು ಪತ್ತೆಯಾಗಿವೆ ಎಂದು ಲೆಕ್ಕ ಹಾಕಿದಾಗ, ಹಿಂದಿನ ವಾರ (ಡಿ.12-ಡಿ.18)ದಲ್ಲಿ 1,103 ಕೊರೊನಾ ಕೇಸ್ಗಳು ದಾಖಲಾಗಿದ್ದವು. ಆದರೆ ಅದರ ಮುಂದಿನ ವಾರ ಅಂದರೆ ಡಿ.19-25ರವರೆಗೆ 1,219 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅಂದರೆ ಶೇ.11ರಷ್ಟು ಏರಿಕೆ ಕಂಡಿದೆ ಎಂದು ಹೇಳಲಾಗಿದೆ. ಅಂದರೆ ಇದು ದೇಶದಲ್ಲಿ ಕೊರೊನಾ ಹೆಚ್ಚಳ ಆಗುತ್ತಿರುವ ಸೂಚನೆಯಾ ಎಂದು ಕೇಳಿದರೆ, ‘ಹೌದು’ ಎಂದು ಈಗಲೇ ಸ್ಪಷ್ಟವಾಗಿ ಉತ್ತರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.
ಮಹಾರಾಷ್ಟ್ರದಲ್ಲಿ ದೈನಂದಿನ ಕೊರೊನಾ ಕೇಸ್ನಲ್ಲಿ ತುಸು ಏರಿಳಿತ ಆಗುತ್ತಿದೆ. ಇನ್ನು ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ, ಪಂಜಾಬ್, ದೆಹಲಿ, ಹಿಮಾಚಲ ಪ್ರದೇಶಗಳಲ್ಲಿ ಕೂಡ ಕೊರೊನಾ ಸ್ವಲ್ಪ ಮಟ್ಟಿಗೆ ಹೆಚ್ಚುತ್ತಿದೆ. ತೆಲಂಗಾಣ-ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕೂಡ ಒಂದು ದಿನ ಸೋಂಕಿತರ ಸಂಖ್ಯೆ ಹೆಚ್ಚು ಕಂಡುಬಂದರೆ, ಇನ್ನೊಂದು ದಿನ ಕಡಿಮೆ ಕೇಸ್ಗಳು ಪತ್ತೆಯಾಗುತ್ತಿವೆ. ನಿಜವಾಗಿಯೂ ಕೊವಿಡ್ 19 ಸೋಂಕು ಹೆಚ್ಚುತ್ತಿದೆಯೋ ಅಥವಾ ಚೀನಾದಲ್ಲಿ ಕೊರೊನಾ ಕಂಡು ಬಂದ ಬೆನ್ನಲ್ಲೇ ಪರೀಕ್ಷೆ ಪ್ರಮಾಣ ಹೆಚ್ಚು ಮಾಡಿದ್ದಕ್ಕೆ ಹೀಗೆ ಕೇಸ್ಗಳೂ ತುಸು ಹೆಚ್ಚಾದಂತೆ ಗೋಚರಿಸುತ್ತಿವೆಯೋ ಸ್ಪಷ್ಟವಾಗಿಲ್ಲ. ಇನ್ನು ಕೊವಿಡ್ 19 ಸಾವಿನ ಸಂಖ್ಯೆಯೂ ಕಡಿಮೆಯೇ ಇದೆ. ಹಿಂದಿನ ವಾರದಲ್ಲಿ 12 ಮಂದಿ ಸೋಂಕಿನಿಂದ ಮೃತಪಟ್ಟಿದ್ದರು. ಅದೇ ಕಳೆದ ವಾರದಲ್ಲಿ 20 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ದೇಶದಲ್ಲಿ ಕೊರೊನಾ ಚೇತರಿಕೆ ಪ್ರಮಾಣ ಶೇ.98ರಷ್ಟಿದೆ.
ಇದನ್ನೂ ಓದಿ: Coronavirus | ಜನರು ಇನ್ನು ಕೋವಿಡ್ ಲಸಿಕೆಯ 2ನೇ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಪ್ರಾರಂಭಿಸಲಿ ಎಂದ ಕೇಂದ್ರ ಆರೋಗ್ಯ ಸಚಿವ