Site icon Vistara News

Rafale Fighter Jet: 90 ಸಾವಿರ ಕೋಟಿ ರೂ.ಗೆ ಯುದ್ಧವಿಮಾನ ಖರೀದಿ! ಭಾರತ-ಫ್ರಾನ್ಸ್ ನಡುವೆ ‘ರಫೇಲ್’ ಡೀಲ್

Rafale Fighter Jet

ನವದೆಹಲಿ: ಭಾರತ ಸರ್ಕಾರವು (Indian Government) ಮತ್ತೆ ರಫೇಲ್ ಯುದ್ಧ ವಿಮಾನಗಳ (Rafale Fighter Jet) ಖರೀದಿಗೆ ಮುಂದಾಗಿದೆ. ಈ ಹಿಂದೆ ಭಾರತವು ಫ್ರಾನ್ಸ್‌ನಿಂದ (France Government) 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿತ್ತು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ವಾರ ಫ್ರಾನ್ಸ್‌ಗೆ ಭೇಟಿ ನೀಡಲಿದ್ದು, ಈ ವೇಳೆ ಭಾರತ ಸರ್ಕಾರವು 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿವೆ. ರಫೇಲ್ ಯುದ್ಧ ವಿಮಾನಗಳ ಜತೆಗೇ ಭಾರತವು ಫ್ರಾನ್ಸ್‌ನಿಂದ ಮೂರು ಸ್ಕಾರ್ಪೀನ್ ವರ್ಗದ ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು (Scorpene class submarine) ಕೂಡ ಖರೀದಿಸಲಿದೆ.

ಈಗಿನ ಪ್ರಸ್ತಾಪದ ಪ್ರಕಾರ, ಭಾರತೀಯ ನೌಕಾ ಪಡೆಯು ನಾಲ್ಕು ಟ್ರೈನರ್ ಏರ್‌ಕ್ರಾಫ್ಟ್‌ಗಳ ಸಹಿತ 22 ಸಿಂಗಲ್ ಸೀಟೆಡ್ ರಫೇಲ್ ಯುದ್ಧ ವಿಮಾನಗಳನ್ನು ಹೊಂದಲಿದೆ. ದೇಶದಾದ್ಯಂತ ಭದ್ರತಾ ಸವಾಲುಗಳ ದೃಷ್ಟಿಯಿಂದ ಭಾರತೀಯ ನೌಕಾಪಡೆಯು ಕೊರತೆಯನ್ನು ಎದುರಿಸುತ್ತಿರುವ ಕಾರಣ ಈ ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಖರೀದಿಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ ಎಂದು ತಿಳಿದು ಬಂದಿದೆ.

ವಿಮಾನಗಳನ್ನು ಹೊತ್ತೊಯ್ಯುವ ಐಎನ್ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್, ಮಿಗ್-19 ಫೈಟರ್‌ಜೆಟ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ಈ ಎರಡೂ ಯುದ್ಧ ಹಡಗುಗಗಳಿಗೆ ರಫೇಲ್ ಯುದ್ಧವಿಮಾನಗಳ ಅಗತ್ಯವಿದೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ಸ್ಕಾರ್ಪೀನ್ ಕ್ಲಾಸ್ ಸಬ್‌ಮರೀನ್‌ಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಾಜೆಕ್ಟ್ 75ರ ಭಾಗವಾಗಿ ನೌಕಾಪಡೆಯು ಈ ಜಲಾಂತರ್ಗಾಮಿಗಳನ್ನು ಮುಂಬೈನ ಮಜಗಾಂವ್ ಡಾಕ್‌ಯಾರ್ಡ್‌‌ನಲ್ಲಿ ನಿರ್ಮಾಣಗೊಳ್ಳಲಿವೆ.

ಈ ಸುದ್ದಿಯನ್ನೂ ಓದಿ: ಫ್ರಾನ್ಸ್‌ನಲ್ಲಿ ಏರ್‌ ಶೋ ವೇಳೆ ಎರಡು ರಫೇಲ್‌ ವಿಮಾನಗಳ ಡಿಕ್ಕಿ!

26 ರಫೇಲ್ ಮತ್ತು ಸ್ಕಾರ್ಪೀನ್ ವರ್ಗದ ಮೂರು ಸಬ್‌ಮರೀನ್‌ಗಳ ಖರೀದಿಗೆ ಭಾರತವು ಸುಮಾರು 90 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಒಪ್ಪಂದದ ಮಾತುಕತೆಗಳು ಪೂರ್ಣಗೊಂಡ ನಂತರವೇ ಅಂತಿಮ ವೆಚ್ಚವು ಸ್ಪಷ್ಟವಾಗಲಿದೆ ಎಂದು ತಿಳಿದು ಬಂದಿದೆ. ಭಾರತವು ಒಪ್ಪಂದದಲ್ಲಿ ಡಿಸ್ಕೌಂಟ್‌ ಪಡೆಯಲು ಒತ್ತಡ ಹೇರುವ ಸಾಧ್ಯತೆ ಇದೆ. ಈ ಯೋಜನೆಯಲ್ಲಿ ಹೆಚ್ಚಿನ ಸಾಧನಗಳನ್ನು ‘ಮೇಕ್-ಇನ್-ಇಂಡಿಯಾ’ ಯೋಜನೆಯ ಭಾಗವಾಗಿಸಲು ಮುಂದಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version