ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೇಶವು ನೂರಕ್ಕೆ ನೂರರಷ್ಟು ನಕ್ಸಲಿಸಂ ಸಮಸ್ಯೆಯಿಂದ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಅಸ್ಸಾಂನ ತೇಜ್ಪುರದಲ್ಲಿ ಶನಿವಾರ ನಡೆದ ಸಶಸ್ತ್ರ ಸೀಮಾ ಬಲದ (ಎಸ್ಎಸ್ಬಿ ) 60 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಶಾ, “ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೇಶವು ನಕ್ಸಲಿಸಂ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದುಹಾಕುತ್ತದೆ ಎಂದು ನಾನು ನಂಬುತ್ತೇನೆ” ಎಂದು ಭರವಸೆ ನೀಡಿದರು.
ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಎಸ್ಎಸ್ಬಿಯ ಶೌರ್ಯವನ್ನು ಶ್ಲಾಘಿಸಿದ ಅಮಿತ್ ಶಾ, ಸಿಆರ್ಪಿಎಫ್ ಮತ್ತು ಬಿಎಸ್ಎಫ್ ಜೊತೆಗೆ ಎಸ್ಎಸ್ಬಿ ನಕ್ಸಲ್ ಚಳವಳಿಯನ್ನು ಅಂಚಿಗೆ ತಂದಿದೆ ಎಂದು ಹೇಳಿದರು.
ನೇಪಾಳ ಮತ್ತು ಭೂತಾನ್ ಜತೆ ಹಂಚಿಕೊಂಡಿರುವ ಗಡಿಗಳನ್ನು ರಕ್ಷಿಸುವುದರ ಜೊತೆಗೆ ಎಸ್ ಎಸ್ ಬಿ ಛತ್ತೀಸ್ ಗಢ, ಜಾರ್ಖಂಡ್ ಮತ್ತು ಬಿಹಾರದಲ್ಲಿ ನಕ್ಸಲರ ವಿರುದ್ಧ ಹೋರಾಡಿದೆ. ನಾನು ಈ ಪ್ರದೇಶಗಳಲ್ಲಿನ ನಕ್ಸಲ್ ಕಾರ್ಯಾಚರಣೆಗಳ ಪರಿಶೀಲನೆಗೆ ಹೋದಾಗಲೆಲ್ಲಾ ಎಸ್ಎಸ್ಬಿ ಧೈರ್ಯದ ಬಗ್ಗೆ ಕೇಳಿದ್ದೇನೆ ಎಂದು ಶಾ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವಲ್ಲಿ ಎಸ್ಎಸ್ಬಿ ಪಾತ್ರದ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವರು “ಜಮ್ಮು ಮತ್ತು ಕಾಶ್ಮೀರದಲ್ಲಿ, ಭಯೋತ್ಪಾದಕರ ವಿರುದ್ಧ ಸಿಆಆರ್ಪಿಎಫ್, ಬಿಎಸ್ಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ಜತೆಗೆ ಎಸ್ಎಸ್ಬಿ ಸಿಬ್ಬಂದಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.
ಎಸ್ಎಸ್ಬಿಯ 60 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಸರ್ಕಾರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ ಎಂದು ಅಮಿತ್ ಶಾ ಇದೇ ಮಾಹಿತಿ ನೀಡಿದರು. ಇಂದು ಸಶಸ್ತ್ರ ಸೀಮಾ ಬಲದ 60ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಭಾರತ ಸರ್ಕಾರವು ಅಂಚೆ ಚೀಟಿ ಬಿಡುಗಡೆ ಮಾಡಿದೆ. ಇದು ಈ ಪಡೆಯ ಕರ್ತವ್ಯ ನಿಷ್ಠೆಯನ್ನು ದೇಶದ ಜನರ ಮುಂದೆ ಶಾಶ್ವತವಾಗಿ ಜೀವಂತವಾಗಿರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Ram Mandir: ಅಯೋಧ್ಯೆಯಲ್ಲಿ ರಾಮಮಂದಿರವೇ ಇರ್ಲಿಲ್ಲ; ಅಸಾದುದ್ದೀನ್ ಓವೈಸಿ ವಿವಾದ!
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ಇತರ ಸಂಸ್ಥೆಗಳು ಸೇರಿದಂತೆ ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಶಾ ಹೇಳಿದರು. ಕಳೆದ ಒಂಬತ್ತು ವರ್ಷಗಳಲ್ಲಿ, ಪ್ರಧಾನಿ ಮೋದಿ ಎಲ್ಲಾ ಸಿಎಪಿಎಫ್ಗಳ ಕಲ್ಯಾಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಅದು ಸಿಆರ್ಪಿಎಫ್ ಅಥವಾ ಎಸ್ಎಸ್ಬಿಯಂಥ ಗಡಿಯಲ್ಲಿ ನಿಯೋಜಿಸಲಾದ ಇತರ ಎಲ್ಲಾ ಸಂಸ್ಥೆಗಳಿಗೆ ಅನ್ವಯವಾಗಿದೆ ಎಂದು ಹೇಳಿದರು.
ಎಸ್ಎಸ್ಬಿಯ ಇತಿಹಾಸದ ಬಗ್ಗೆ ಮಾತನಾಡಿದ ಶಾ, “ಎಸ್ಎಸ್ಬಿ ದೇಶ ಸೇವೆ ಮತ್ತು ರಕ್ಷಣೆಯಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಭಾರತ-ಚೀನಾ ಯುದ್ಧದ ನಂತರ, ಎಸ್ಎಸ್ಬಿಯನ್ನು 1963 ರಲ್ಲಿ ಸ್ಥಾಪಿಸಲಾಯಿತು ಮತ್ತು ಅಟಲ್ ಜಿ (ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ) ‘ಒಂದು ಗಡಿ ಒಂದು ಪಡೆ’ ನೀತಿಯನ್ನು ಜಾರಿಗೆ ತಂದ ನಂತರ, ಎಸ್ಎಸ್ಬಿ 2001 ರಿಂದ ಭಾರತ-ನೇಪಾಳ ಗಡಿಯನ್ನು ಮತ್ತು 2004 ರಿಂದ ಭಾರತ-ಭೂತಾನ್ ಗಡಿಯನ್ನು ಕರ್ತವ್ಯನಿಷ್ಠೆಯಿಂದ ರಕ್ಷಿಸುತ್ತಿದೆ.