Site icon Vistara News

Narendra Modi: 6G ತಂತ್ರಜ್ಞಾನದಲ್ಲಿ ಭಾರತ ಜಗತ್ತನ್ನೇ ಆಳಲಿದೆ; ಮೋದಿ ವಿಶ್ವಾಸ

Narendra Modi

India will lead the world on 6G, says PM Narendra Modi At India Mobile Congress

ನವದೆಹಲಿ: “ಭಾರತದಲ್ಲಿ ಯಶಸ್ವಿಯಾಗಿ 5ಜಿ ಸೇವೆಗಳಿಗೆ ಚಾಲನೆ ನೀಡಲಾಗಿದ್ದು, ಸಾಮಾನ್ಯರು ಸೇರಿ ಎಲ್ಲರೂ ಬಳಕೆ ಮಾಡುತ್ತಿದ್ದಾರೆ. ಆದರೆ, 6ಜಿ ತಂತ್ರಜ್ಞಾನದಲ್ಲಿ (6G Technology) ಭಾರತವು ಜಗತ್ತನ್ನೇ ಮುನ್ನಡೆಸಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶ್ವಾಸ ವ್ಯಕ್ತಪಡಿಸಿದರು. ದೆಹಲಿಯ ಭಾರತ ಮಂಟಪಂ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರದಿಂದ (ಅಕ್ಟೋಬರ್‌ 27) ಮೂರು ದಿನ ನಡೆಯುವ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ (IMC 2023) ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

“ಜಗತ್ತಿನಲ್ಲೇ ಭಾರತವು ಆಧುನಿಕ ತಂತ್ರಜ್ಞಾನಕ್ಕೆ ವೇಗವಾಗಿ ತೆರೆದುಕೊಳ್ಳುತ್ತಿದೆ. 21ನೇ ಶತಮಾನದಲ್ಲಿ ಜಗತ್ತು ಕ್ಷಿಪ್ರವಾಗಿ ಬದಲಾವಣೆ ಹೊಂದುತ್ತಿರುವ ಸಂದರ್ಭದಲ್ಲಿ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ ಕಾರ್ಯಕ್ರಮ ನಡೆಯುತ್ತಿದೆ. ಭಾರತದಲ್ಲೂ ತಂತ್ರಜ್ಞಾನ ಬದಲಾವಣೆಯಿಂದ ಕೋಟ್ಯಂತರ ಜನರ ಭವಿಷ್ಯ ಉಜ್ವಲವಾಗಲಿದೆ. ಭಾರತದಲ್ಲಿ ವೇಗವಾಗಿ 5ಜಿ ಇಂಟರ್‌ನೆಟ್‌ ಸೇವೆ ಪಸರಿಸಿದೆ. 5ಜಿ ಜಾರಿಯಾದ ಒಂದೇ ವರ್ಷದಲ್ಲಿ 4 ಲಕ್ಷ ಬೇಸ್‌ ಸ್ಟೇಷನ್‌ಗಳನ್ನು ನಿರ್ಮಿಸಲಾಗಿದೆ. ಮೊಬೈಲ್‌ ಬ್ರಾಡ್‌ಬ್ಯಾಂಡ್‌ ವೇಗದಲ್ಲಿ ಭಾರತವು 118ನೇ ಸ್ಥಾನದಿಂದ 43ನೇ ಸ್ಥಾನಕ್ಕೆ ಏರಿಕೆಯಾಗಿದೆ. 6ಜಿ ತಂತ್ರಜ್ಞಾನದಲ್ಲಂತೂ ಭಾರತವು ಜಗತ್ತನ್ನೇ ಮುನ್ನಡೆಸಲಿದೆ” ಎಂದು ಹೇಳಿದರು.

“ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ಯುವಕರು ಮಹೋನ್ನತವಾದುದನ್ನು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ. ಭಾರತದಲ್ಲಿ 2014ರಲ್ಲಿ ಸಾವಿರಾರು ಸಂಖ್ಯೆಯಲ್ಲಿ ನವೋದ್ಯಮಗಳು ಇದ್ದವು. ಈಗ ಲಕ್ಷಾಂತರ ನವೋದ್ಯಮಗಳಿಗೆ ಭಾರತ ಸಾಕ್ಷಿಯಾಗಿದೆ. ನವೋದ್ಯಮಗಳ ಸ್ನೇಹಿ ವಾತಾವರಣ ಸೃಷ್ಟಿಯಲ್ಲಿ ಭಾರತವು ಜಗತ್ತಿನ ಮೂರು ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ದೇಶದ ಏಳಿಗೆಯ, ತಂತ್ರಜ್ಞಾನ ಅಳವಡಿಕೆಯ ಮಾನದಂಡವಾಗಿದೆ” ಎಂದು ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ: Indian Economy: ಜಪಾನ್‌ಅನ್ನೂ ಹಿಂದಿಕ್ಕಲಿದೆ ಭಾರತದ ಆರ್ಥಿಕತೆ; ಮೋದಿ ಕನಸು ಶೀಘ್ರ ನನಸು

ಭಾರತದಿಂದ ಮೊಬೈಲ್‌ ರಫ್ತು

ಭಾರತದಲ್ಲಿ ಮೊಬೈಲ್‌ ಉತ್ಪಾದನೆ ಕುರಿತು ನರೇಂದ್ರ ಮೋದಿ ಮಾತನಾಡಿದರು. “ಭಾರತದಲ್ಲಿ 2014ರಲ್ಲಿ ಮೊಬೈಲ್‌ ರಫ್ತು ಮಾಡಲಾಗುತ್ತಿತ್ತು. ಆದರೆ, ಈಗ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಮೊಬೈಲ್‌ ಉತ್ಪಾದಿಸುವ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ನಾವೀಗ 2 ಲಕ್ಷ ಕೋಟಿ ರೂ. ಮೌಲ್ಯದ ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ. ಇತ್ತೀಚೆಗೆ, ಭಾರತದಲ್ಲಿಯೇ ಪಿಕ್ಸೆಲ್‌ ಫೋನ್‌ಗಳನ್ನು ಉತ್ಪಾದಿಸುವುದಾಗಿ ಗೂಗಲ್‌ ಘೋಷಣೆ ಮಾಡಿದೆ. ಈಗಾಗಲೇ ದೇಶದಲ್ಲಿಯೇ ಸ್ಯಾಮ್‌ಸಂಗ್‌ನ ಫೋಲ್ಡ್‌ 5 ಹಾಗೂ ಆ್ಯಪಲ್‌ನ ಐ ಫೋನ್‌ 15 ಮೊಬೈಲ್‌ಗಳ ಉತ್ಪಾದನೆಯಾಗುತ್ತಿದೆ” ಎಂದರು.

Exit mobile version