ನವದೆಹಲಿ: ಭಾರತೀಯ ವಾಯಪಡೆ ಭಾನುವಾರ ಅಗ್ನಿಪಥ್ ನೇಮಕಾತಿ ಯೋಜನೆಯ ಸಮಗ್ರ ವಿವರಗಳನ್ನು ಬಿಡುಗಡೆಗೊಳಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಗ್ನಿವೀರರಿಗೆ ಸೇನೆಯಲ್ಲಿ 10% ಮೀಸಲಾತಿಯನ್ನು ಶನಿವಾರ ಘೋಷಿಸಿದ್ದರು. ಸೇನೆಯಲ್ಲಿ ನಾಲ್ಕು ವರ್ಷಗಳ ಸೇವೆಯ ಬಳಿಕ ಅಗ್ನಿವೀರರಿಗೆ ರಕ್ಷಣಾ ಸಚಿವಾಲಯದ ಜತೆಗೆ ಇತರ ಇಲಾಖೆಗಳಲ್ಲೂ ಉದ್ಯೋಗಾವಕಾಶ ಕಲ್ಪಿಸಲು ಮಾರ್ಗೋಪಾಯ ಕಂಡುಕೊಳ್ಳಲಾಗುತ್ತಿದೆ.
ಸೇನಾ ಮುಖ್ಯಸ್ಥರ ಜತೆ ಇಂದು ರಕ್ಷಣಾ ಸಚಿವ ಮಾತುಕತೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೂರೂ ಸೇನಾಪಡೆಗಳ ಮುಖ್ಯಸ್ತರುಗಳ ಜತೆ ಇಂದು ಮಾತುಕತೆ ನಡೆಸಲಿದ್ದಾರೆ. ಅಗ್ನಿಪಥ್ ಯೋಜನೆಯ ಕುರಿತ ವಿವಾದ ಬಗೆಹರಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಲುಧಿಯಾನಾ ರೈಲ್ವೆ ನಿಲ್ದಾಣಕ್ಕೆ ದಾಳಿ
ಅಗ್ನಿಪಥ್ ಯೋಜನೆ ವಿರೋಧಿಸಿ ಉತ್ತರಭಾರತದಲ್ಲಿ ಹಿಂಸಾಚಾರ ಭಾನುವಾರವೂ ಮುಂದುವರಿದಿದೆ. ಪಂಜಾಬ್‌ನ ಲುಧಿಯಾನದಲ್ಲಿ ರೈಲ್ವೆ ಸ್ಟೇಶನ್‌ಗೆ ಪ್ರತಿಭಟನಾಕಾರರು ದಾಳಿ ನಡೆಸಿದರು. ಸಿಸಿಟಿವಿಗಳಲ್ಲಿ ದೃಶ್ಯ ಸೆರೆಯಾಗಿದ್ದು, ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 8-10 ಪ್ರತಿಭಟನಾಕಾರರ ಗುಂಪು ನಿಲ್ದಾಣಕ್ಕೆ ನುಗ್ಗಿ ದಾಳಿ ನಡೆಸಿತು.
ವಾಯುಪಡೆ ಅಗ್ನಿಪಥ್ ಬಗ್ಗೆ ಹೇಳಿರುವುದೇನು?
೧. ಅಗ್ನಿಪಥ್ ಸಶಸ್ತ್ರ ಸೇನಾಪಡೆಯ ಹೊಸ ನೇಮಕಾತಿ ಯೋಜನೆಯಾಗಿದೆ. ಈ ಯೋಜನೆಯಡಿ ಸೇನೆಗೆ ನೇಮಕವಾಗುವವರನ್ನು ಅಗ್ನಿವೀರರು ಎಂದು ಕರೆಯಲಾಗುವುದು. ಈ ಯೋಜನೆಯಡಿಯಲ್ಲಿ ವಾಯುಪಡೆಗೆ ನೇಮಕವಾಗುವವರಿಗೆ 4 ವರ್ಷಗಳ ಅವಧಿಗೆ ವಾಯುಪಡೆ ಕಾಯಿದೆ-1950 ಅನ್ವಯವಾಗುತ್ತದೆ. ದೇಶದ ಎಲ್ಲ ಭಾಗಗಳಿಂದಲೂ ನೇಮಕಾತಿ ನಡೆಯಲಿದೆ. ಇದಕ್ಕಾಗಿ ಆನ್‌ಲೈನ್ STAR ಪರೀಕ್ಷೆ, ವಿಶೇಷ ರ್‍ಯಾಲಿಗಳು ನಡೆಯಲಿವೆ. ಮಾನ್ಯತೆ ಪಡೆದ ಪ್ರತಿಷ್ಠಿತ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ಗಳಲ್ಲಿ ನೇಮಕಾತಿ ಶಿಬಿರಗಳನ್ನು ಆಯೋಜಿಸಲಾಗುವುದು. (ಉದಾಹರಣೆಗೆ NSQF)
2. ನೇಮಕಾತಿಯ ಭಾಗವಾಗಿ ಎಲ್ಲ ಷರತ್ತು ಮತ್ತು ನಿಬಂಧನೆಗಳಿಗೆ ಅಗ್ನಿವೀರರು ಔಪಚಾರಿಕವಾಗಿ ಅನುಮೋದನೆ ನೀಡಬೇಕು. 18 ವರ್ಷಕ್ಕಿಂತ ಕೆಳಗಿನ ಆಕಾಂಕ್ಷಿಗಳು ಪೋಷಕರ/ಪಾಲಕರ ಲಿಖಿತ ಒಪ್ಪಿಗೆ ಪಡೆದಿರಬೇಕು.
೩. ನಾಲ್ಕು ವರ್ಷಗಳ ಬಳಿಕ ಅಗ್ನಿವೀರರು ಸಮಾಜಕ್ಕೆ ಮರಳುತ್ತಾರೆ. ಹೀಗಿದ್ದರೂ ವಾಯು ಸೇನೆಯ ಅಗತ್ಯಾನುಸಾರ ರೆಗ್ಯುಲರ್ ಕೇಡರ್‌ನಲ್ಲೂ ಅರ್ಹ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುವುದು. ಅಗ್ನಿವೀರರು ಗಳಿಸಿದ ಕೌಶಲಗಳಿಗೆ ಸರ್ಟಿಫಿಕೇಟ್ ಪ್ರದಾನ ಮಾಡಲಾಗುವುದು. ಇದಕ್ಕೆ ಕೇಂದ್ರೀಯ ಮಂಡಳಿಯ ಮಾನ್ಯತೆಯೂ ಇರುತ್ತದೆ. ಶೇ.25ಕ್ಕಿಂತ ಹೆಚ್ಚಿನ ಅಗ್ನಿವೀರರನ್ನು ವಾಯುಪಡೆಗೆ ನೇಮಕ ಮಾಡಿಕೊಳ್ಳಲಾಗುವುದಿಲ್ಲ.
೪. ಅಗ್ನಿವೀರರಿಗೆ ನಾಲ್ಕು ವರ್ಷಗಳ ಸೇವೆಯ ಬಳಿಕ ಸಶಸ್ತ್ರ ಸೇನಾಪಡೆಯಲ್ಲಿ ಆಯ್ಕೆಯಾಗಲೇಬೇಕು ಎಂಬ ಯಾವುದೇ ಹಕ್ಕು ಇರುವುದಿಲ್ಲ. ಸರ್ಕಾರದ ನಿಯಮಾನುಸಾರ ನೇಮಕಾತಿ ನಡೆಯುತ್ತದೆ.
ಪ್ರತಿಭಟನಾಕಾರರ ವಾದವೇನು?
ಅಗ್ನಿಪಥ್ ಯೋಜನೆಯಿಂದ ಸಶಸ್ತ್ರ ಸೇನಾಪಡೆಯಲ್ಲಿ ಪಿಂಚಣಿ, ಗ್ರಾಚ್ಯುಯಿಟಿ ಇತ್ಯಾದಿಗಳು ಇರುವ ಕಾಯಂ ಉದ್ಯೋಗಾವಕಾಶಗಳು ಕಡಿಮೆಯಾಗುತ್ತದೆ ಎಂಬುದು ಪ್ರತಿಭಟನಾಕಾರರ ಆರೋಪ. ಆದ್ದರಿಂದ ಸರ್ಕಾರ ಯೋಜನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.