ನವದೆಹಲಿ: ಲಡಾಕ್‌ನ ಹಲವು ವ್ಯೂಹಾತ್ಮಕ ಪ್ರದೇಶಗಳಿಂದ ಭಾರತ ಹಾಗೂ ಚೀನಾದ ಸೈನಿಕರನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಕಳೆದ ಎರಡು ವರ್ಷಗಳಿಂದ ಉಭಯ ದೇಶಗಳ ಮಧ್ಯೆ ಉಂಟಾಗಿದ್ದ ಬಿಕ್ಕಟ್ಟು (India China Conflict) ಸಂಪೂರ್ಣವಾಗಿ ಶಮನವಾಗಿದೆ ಎಂದೇ ಹೇಳಲಾಗುತ್ತಿದೆ.
ಭಾರತ ಹಾಗೂ ಚೀನಾ ನಡುವೆ ಸೇನೆ ಮಟ್ಟದಲ್ಲಿ ೧೬ನೇ ಸುತ್ತಿನ ಮಾತುಕತೆ ಬಳಿಕ ಲಡಾಕ್ ಗಡಿಗಳಲ್ಲಿ ಯಥಾಸ್ಥಿತಿ ಕಾಪಾಡಲು ಎರಡೂ ದೇಶಗಳು ಮುಂದಾಗಿವೆ. ಅದರಲ್ಲೂ, ಎರಡು ವರ್ಷದಿಂದ ಮೊಂಡುತನ ಪ್ರದರ್ಶಿಸುತ್ತಿದ್ದ ಚೀನಾ ತನ್ನ ಸೈನಿಕರನ್ನು ಹಿಂಪಡೆದಿದೆ. ಇದಕ್ಕೆ ಭಾರತವೂ ಸಕಾರಾತ್ಮಕವಾಗಿ ಸ್ಪಂದಿಸಿ, ಎಲ್ಲ ಸೈನಿಕರನ್ನು ಹಿಂಪಡೆದಿದೆ.
ಸೆಪ್ಟೆಂಬರ್ ೮ರಿಂದಲೇ ಎರಡೂ ದೇಶಗಳ ಸೈನಿಕರನ್ನು ಹಿಂಪಡೆಯಲಾಗುತ್ತಿದೆ. ಇದೀಗ ಪ್ರಮುಖ ವ್ಯೂಹಾತ್ಮಕ ಸ್ಥಳಗಳಿಂದ ಸೈನಿಕರನ್ನು ವಾಪಸ್ ಪಡೆಯುವ ಪ್ರಕ್ರಿಯೆ ಮುಗಿದಿದೆ. ಹಾಗಾಗಿ ಎರಡೂ ವರ್ಷದಿಂದ ಉಂಟಾಗಿದ್ದ ಬಿಕ್ಕಟ್ಟು ಬಹುತೇಕ ಅಂತ್ಯವಾದಂತಾಗಿದೆ ಎನ್ನಲಾಗಿದೆ.
೨೦೨೦ ಮೇ ೫ರಂದು ಲಡಾಕ್ ಗಡಿಗಳಲ್ಲಿ ಚೀನಾ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ಉದ್ಧಟತನ ಮೆರೆದಿತ್ತು. ಇದಾದ ಬಳಿಕ ಉಭಯ ಸೈನಿಕರ ಮಧ್ಯೆ ಸಂಘರ್ಷವೂ ಏರ್ಪಟ್ಟಿತ್ತು. ಹಲವು ಸುತ್ತಿನ ಮಾತುಕತೆ ಬಳಿಕವೂ ಚೀನಾ ಸೇನೆ ಹಿಂಪಡೆಯಲು ಒಪ್ಪಿರಲಿಲ್ಲ. ಹಾಗಾಗಿ ಬಿಕ್ಕಟ್ಟು ಮುಂದುವರಿದಿತ್ತು.
ಇದನ್ನೂ ಓದಿ | ಲಡಾಕ್‌ನಲ್ಲಿ ಚೀನಾದ ಉಪಟಳ ನಿಗ್ರಹಿಸಲು ಸೇನೆಗೆ ಬಂತು ಹೊಸ ಯುದ್ಧ ವಾಹನ