ನವದೆಹಲಿ: ಭಾರತದ ಸೇನೆಗೆ ಕಿರು ಅವಧಿಗೆ ಸೇವೆ ಸಲ್ಲಿಸುವ ‘ಅಗ್ನಿವೀರ್’ (Agniveer Recruitment) ಯೋಜನೆಗೆ ದೇಶಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಲಕ್ಷಾಂತರ ಯುವಕರು ಅರ್ಜಿ ಹಾಕುತ್ತಿದ್ದು, ಈಗಾಗಲೇ ಸಾವಿರಾರು ಜನರನ್ನು ನೇಮಕ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಸೇನೆಯು ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.
ಅಗ್ನಿವೀರರಾಗಿ ನೇಮಕಗೊಳ್ಳಲು ಇನ್ನುಮುಂದೆ ಆನ್‌ಲೈನ್ ಟೆಸ್ಟ್‌ನಲ್ಲಿ ಉತ್ತೀರ್ಣರಾಗುವುದನ್ನು ಸೇನೆಯು ಕಡ್ಡಾಯಗೊಳಿಸಿದೆ. ಇದುವರೆಗೆ ಮೊದಲು ದೈಹಿಕ ಪರೀಕ್ಷೆ, ನಂತರ ವೈದ್ಯಕೀಯ ತಪಾಸಣೆ ಹಾಗೂ ಕೊನೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ನಡೆಸಲಾಗುತ್ತಿತ್ತು. ಪ್ರಸಕ್ತ ವರ್ಷದಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಪ್ರಸಕ್ತ ವರ್ಷದ ನೇಮಕಾತಿಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಗೆ ಫೆಬ್ರವರಿ ಮಧ್ಯಭಾಗದಲ್ಲಿ ಚಾಲನೆ ನೀಡಲಾಗುತ್ತದೆ.
ನೂತನ ಬದಲಾವಣೆ ಪ್ರಕಾರ, ಅಭ್ಯರ್ಥಿಗಳು ಮೊದಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಇದಾದ ನಂತರ ಆನ್‌ಲೈನ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳಬೇಕು. ಆನ್‌ಲೈನ್ ಟೆಸ್ಟ್‌ನಲ್ಲಿ ಪಾಸಾದರೆ ಅವರು, ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುತ್ತಾರೆ. ಇಲ್ಲೂ ಉತ್ತೀರ್ಣರಾದರೆ ಕೊನೆಯದಾಗಿ ವೈದ್ಯಕೀಯ ತಪಾಸಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಾರ್ಚ್ ಮೊದಲ ವಾರದಲ್ಲಿಯೇ ೨೧ ಸಾವಿರ ಅಗ್ನಿವೀರರು ಸೇನೆ ಸೇರ್ಪಡೆಯಾಗಲಿದ್ದಾರೆ.
ಇದನ್ನೂ ಓದಿ: Agniveer in Hyderabad | ಹೈದ್ರಾಬಾದ್‌ನಲ್ಲಿ ಮೊದಲ ಬ್ಯಾಚಿನ ಅಗ್ನಿವೀರರಿಗೆ ತರಬೇತಿ