Site icon Vistara News

Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್‌ಐ’ ಎಂದು ಬರೆದ ದುರುಳರು!

Army Jawan Attacked In Kerala

Indian Army jawan attacked in Kerala, PFI written on his back

ತಿರುವನಂತಪುರಂ: ಭಾರತವನ್ನು ಕಾಯುವ ಸೈನಿಕರಿಗೆ ದೇಶಾದ್ಯಂತ ಅಪಾರ ಗೌರವವಿದೆ. ಗಡಿಯಲ್ಲಿ ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ, ಉಗ್ರರ ಗುಂಡಿನ ಭೀತಿಯೂ ಇಲ್ಲದೆ, ಪ್ರಾಣವನ್ನೇ ಪಣಕ್ಕಿಂತು ದೇಶ ಕಾಯುತ್ತಾರೆ ಎಂಬ ಕಾರಣಕ್ಕಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಯೋಧರ (Indian Army) ಬಗ್ಗೆ ಗೌರವ ಇದೆ. ಯೋಧರನ್ನು ನೋಡಿದಾಗಲೆಲ್ಲ ಹೆಮ್ಮೆ ಎನಿಸುತ್ತದೆ. ಆದರೆ, ಕೇರಳದಲ್ಲಿ ಒಂದಷ್ಟು ದುರುಳರು ಭಾರತೀಯ ಸೇನೆಯ ಯೋಧರೊಬ್ಬರ (Army Jawan) ಮೇಲೆ ದಾಳಿ ಮಾಡಿ, ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಅವರ ಬೆನ್ನಿನ ಮೇಲೆ ನಿಷೇಧಿತ ಸಂಘಟನೆ ‘ಪಿಎಫ್‌ಐ’ ಎಂದು ಬರೆಯುವ ಮೂಲಕ ಕುತ್ಸಿತ ಮನಸ್ಸನ್ನು ಪ್ರದರ್ಶಿಸಿದ್ದಾರೆ.

ಕೊಲ್ಲಂ ಜಿಲ್ಲೆಯ ಚನಪ್ಪರ ಎಂಬ ಗ್ರಾಮದಲ್ಲಿ ಒಂದಷ್ಟು ಜನ ಭಾನುವಾರ (ಸೆಪ್ಟೆಂಬರ್‌ 24) ರಾತ್ರಿ ಯೋಧನ ಮೇಲೆ ದಾಳಿ ನಡೆಸಿದ್ದಾರೆ. ಹಲ್ವೀಲ್‌ ಶೈನ್‌ ಕುಮಾರ್ ಎಂಬ ಯೋಧ ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್‌ ಹಾಗೂ ಮೆಕ್ಯಾನಿಕಲ್‌ (EME) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾನುವಾರ ರಾತ್ರಿ ಇವರನ್ನು ಮನೆಯಿಂದ ಹೊರಗೆ ಎಳೆದೊಯ್ದು, ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರು ದುರುಳರು ಸೈನಿಕನ ಮನೆಗೆ ನುಗ್ಗಿದ್ದಾರೆ. ಮನೆಯಿಂದ ಯೋಧನನ್ನು ಹೊರಗೆ ಎಳೆದುಕೊಂಡು ಹೋಗಿದ್ದಾರೆ. ಹಲ್ವೀನ್‌ ಶೈನ್‌ ಅವರಿಗೆ ಒದೆಯುವ ಜತೆಗೆ ಅವರ ಕೈ-ಕಾಲುಗಳನ್ನು ಕಟ್ಟಿ ಹಲ್ಲೆ ನಡೆಸಿದ್ದಾರೆ. ಹಾಗೆಯೇ, ಸೈನಿಕ ಧರಿಸಿದ ಬಟ್ಟೆ ಹರಿದು, ಅವರ ಮೈಮೇಲೆ ಪಿಎಫ್‌ಐ ಎಂಬುದಾಗಿ ಬರೆದಿದ್ದಾರೆ. ಇದಾದ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹಲ್ವೀಲ್‌ ಶೈನ್‌ ಕುಮಾರ್ ‌ಅವರು ಬಳಿಕ ಪಂಗೋಡೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಿದ್ದಾರೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಆತ್ಮಾಹುತಿ ದಾಳಿಗೆ ಎದೆಕೊಟ್ಟು ಆಕೆ ಬಂಡೆಯಂತೆ ನಿಂತಿದ್ದರು!

ಪಿಎಫ್‌ಐ ಕಾರ್ಯಕರ್ತರ ಕೃತ್ಯ?

ಉಗ್ರರಿಗೆ ಹಣಕಾಸು ನೆರವು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಆರೋಪದಲ್ಲಿ ಕಳೆದ ವರ್ಷ ಕೇಂದ್ರ ಸರ್ಕಾರವು ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದೆ. ಇಷ್ಟಿದ್ದರೂ ಅದರ ಕಾರ್ಯಕರ್ತರು ಕದ್ದು ಮುಚ್ಚಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಇದೇ ಕಾರ್ಯಕರ್ತರು ಹಲ್ವೀಲ್‌ ಶೈನ್‌ ಕುಮಾರ್‌ ಅವರ ಮೇಲೆಯೂ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಯೋಧನ ಬೆನ್ನಿನ ಮೇಲೆ ಪಿಎಫ್‌ಐ ಎಂಬುದಾಗಿ ಬರೆದಿರುವುದು ಕೂಡ ಇಂತಹ ಶಂಕೆ ವ್ಯಕ್ತವಾಗಲು ಕಾರಣವಾಗಿದೆ.

Exit mobile version