ನವ ದೆಹಲಿ: ಟರ್ಕಿ-ಸಿರಿಯಾದಲ್ಲಿ ಫೆ.6ರಂದು ಭೂಕಂಪ ಉಂಟಾಗಿ ಬಹುದೊಡ್ಡ ಮಟ್ಟದ ಹಾನಿಯಾಗಿದೆ. ಅಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಭಾರತದಿಂದ 99 ಸಿಬ್ಬಂದಿಯನ್ನೊಳಗೊಂಡ ಸೇನಾ ತಂಡ ಹೋಗಿದೆ. ‘ಆಪರೇಶನ್ ದೋಸ್ತ್’ ಹೆಸರಿನಡಿ ಟರ್ಕಿ-ಸಿರಿಯಾದಲ್ಲಿ ಭಾರತದ ರಕ್ಷಣಾ ಪಡೆಗಳು ಭರದಿಂದ ಕಾರ್ಯಾಚರಣೆ ನಡೆಸುತ್ತಿವೆ. ಹೀಗೆ ಟರ್ಕಿಗೆ ತೆರಳಿದ್ದ ಭಾರತೀಯ ಸೈನಿಕನೊಬ್ಬರಿಗೆ ಅವರ ಮನೆಯಿಂದ ಗುಡ್ನ್ಯೂಸ್ ಹೋಗಿದೆ.
ಉತ್ತರ ಪ್ರದೇಶದ ಹಾಪುರದವರಾದ ಹವಾಲ್ದಾರ್ ರಾಹುಲ್ ಚೌಧರಿ ಈಗ ಟರ್ಕಿಯಲ್ಲಿದ್ದಾರೆ. ಇತ್ತ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ರಾಹುಲ್ ಚೌಧರಿ ಅಪ್ಪನಾಗಿದ್ದಾರೆ. ಅವರ ಪತ್ನಿಗೆ ಹೆರಿಗೆಯಾಗಿ, ಪುಟ್ಟ ಕಂದ ಜಗತ್ತಿಗೆ ಕಾಲಿಟ್ಟಿದೆ. ರಾಹುಲ್ ಚೌಧರಿಗೆ ಮಗುವಿನ ಫೋಟೋ ಕಳಿಸಿದ್ದು, ಅದನ್ನು ನೋಡಿ ಫುಲ್ ಖುಷಿಯಾಗಿದ್ದಾರೆ. ಭಾವನಾತ್ಮಕವಾಗಿ ಕಣ್ತುಂಬಿಕೊಂಡಿದ್ದಾರೆ.
ಇದನ್ನೂ ಓದಿ: Turkey Earthquake: ಟರ್ಕಿ ಭೂಕಂಪ; 178 ತಾಸು ಕಟ್ಟಡದ ಅವಶೇಷಗಳಲ್ಲಿ ಸಿಲುಕಿಯೂ ಬದುಕಿ ಬಂದ 6 ವರ್ಷದ ಬಾಲಕಿ
ಟರ್ಕಿ-ಸಿರಿಯಾಕ್ಕೆ ತೆರಳಬೇಕಾದ ಭಾರತೀಯ ಸೇನಾ ತಂಡದಲ್ಲಿ ರಾಹುಲ್ ಚೌಧರಿ ಹೆಸರಿತ್ತು. ಅವರ ಪಾಸ್ಪೋರ್ಟ್ಗೆ ಸಹಿ ಬಿದ್ದೂ ಆಗಿತ್ತು. ಆದರೆ ತುಂಬು ಗರ್ಭಿಣಿಯಾದ ಪತ್ನಿಯನ್ನು ಬಿಟ್ಟು, ಅಷ್ಟು ದೂರದ ದೇಶಕ್ಕೆ ಹೋಗೋದು ಹೇಗೆ ಎಂಬುದು ರಾಹುಲ್ ಚೌಧರಿ ತಳಮಳವಾಗಿತ್ತು. ಬಳಿಕ ತಮ್ಮ ಹಿರಿಯ ಅಧಿಕಾರಿಗಳ ಬಳಿ ಹೋಗಿ ಅವರು ಈ ವಿಷಯ ಹೇಳಿದರು. ಸ್ಪಂದಿಸಿದ ಅಧಿಕಾರಿಗಳು, ಒಮ್ಮೆ ನಿಮ್ಮ ಪತ್ನಿಯ ಬಳಿ ಮಾತನಾಡಿ ಎಂದು ರಾಹುಲ್ಗೆ ಸಲಹೆ ಕೊಟ್ಟಿದ್ದರು. ರಾಹುಲ್ ಚೌಧರಿ ತಮ್ಮ ಪತ್ನಿಯ ಬಳಿ ಮಾತನಾಡಿದಾಗ, ಅವರು ಸೈನಿಕನ ಮಡದಿ ತಾನು ಎಂಬುದನ್ನು ಸಂಪೂರ್ಣವಾಗಿ ಅರಿತುಕೊಂಡು, ‘ಕರ್ತವ್ಯ ಮೊದಲು’ ಎಂದಿದ್ದರು. ಅದರಂತೆ ರಾಹುಲ್ ಚೌಧರಿ ಬ್ಯಾಗ್ ಪ್ಯಾಕ್ ಮಾಡಿಕೊಂಡು ಟರ್ಕಿಗೆ ಬಂದಿದ್ದರು.
ರಾಹುಲ್ ಚೌಧರಿ ಟರ್ಕಿಯ ಫ್ಲೈಟ್ ಹತ್ತುವಾಗ, ಅವರ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರಿಗೆ ಮಗುವಿನ ಆಗಮನದ ಖುಷಿಯ ಸುದ್ದಿ ಬಂದಿದೆ. ‘ಆ ಮಗುವಿಗೆ ಟರ್ಕಿ ಚೌಧರಿ ಎಂದೇ ನಾಮಕರಣ ಮಾಡಿಬಿಡಿ’ ಎಂದು ಸಹೋದ್ಯೋಗಿಗಳು ಕಾಲೆಳೆಯುತ್ತಿದ್ದಾರೆ.