ಗ್ಯಾಂಗ್‌ಟಾಕ್: ಭಾರತದ ಗಡಿಯಲ್ಲಿ ವೈರಿಗಳಿಂದ ರಕ್ಷಣೆ ಇರಲಿ, ದೇಶದ ಯಾವುದೇ ಮೂಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಲಿ, ಅವಘಡ ಆಗಲಿ, ಜನರ ರಕ್ಷಣೆಗೆ ಭಾರತೀಯ ಯೋಧರು ಸದಾ ಸಿದ್ಧರಾಗಿರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಸಿಕ್ಕಿಂನಲ್ಲಿ ಅತಿಯಾದ ಹಿಮಪಾತದಿಂದ ಸಂಕಷ್ಟಕ್ಕೆ ಸಿಲುಕಿದ ಸುಮಾರು 370 ಪ್ರವಾಸಿಗರನ್ನು ಯೋಧರು (Indian Army Rescue) ರಕ್ಷಿಸಿದ್ದಾರೆ.
ಸಿಕ್ಕಿಂನ ಹಲವೆಡೆ ಮಾರ್ಚ್ 11ರಿಂದ ಹಿಮಪಾತ ಜಾಸ್ತಿಯಾಗಿದ್ದು, ನಾತು ಲಾ ಹಾಗೂ ತ್ಸೋಮ್ಗೊ ಪ್ರದೇಶದಲ್ಲಿ 900ಕ್ಕೂ ಅಧಿಕ ಜನ ಸಂಕಷ್ಟಕ್ಕೆ ಸಿಲುಕಿದ್ದರು. ತಾಸುಗಟ್ಟಲೆ ಕಾದು ಒಂದಷ್ಟು ಜನ ವಾಹನಗಳಲ್ಲಿ ಸಾಗುತ್ತಿದ್ದರು. ಆದರೂ ಎಲ್ಲ ನಾಗರಿಕರು ಹಿಮದಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ.
ಇದನ್ನು ಮನಗಂಡ ತ್ರಿಶಕ್ತಿ ಕಾರ್ಪ್ಸ್ ಯೋಧರು, ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಸಿಬ್ಬಂದಿಯು ಮಾರ್ಚ್ 11ರ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೆ ಕಾರ್ಯಾಚರಣೆ ಕೈಗೊಂಡು ಮಹಿಳೆಯರು, ಮಕ್ಕಳು ಸೇರಿ 370 ಜನರನ್ನು ರಕ್ಷಿಸಿದ್ದಾರೆ. ಹಿಮದಿಂದ ಆಚೆ ಬಂದ ನಾಗರಿಕರು ಯೋಧರಿಗೆ ಸೆಲ್ಯೂಟ್ ಮಾಡಿರುವ ಚಿತ್ರಗಳು ಲಭ್ಯವಾಗಿವೆ. ಸೆಲ್ಯೂಟ್ ಹೊಡೆಯುವ ಮೂಲಕ ಜನರು ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Drowned in Sea: ಗೋಕರ್ಣದ ಕುಡ್ಲೆ ಸಮುದ್ರದಲ್ಲಿ ಮುಳುಗುತ್ತಿದ್ದ ಐವರು ಪ್ರವಾಸಿಗರ ರಕ್ಷಣೆ