ಶ್ರೀನಗರ: ಪಾಕಿಸ್ತಾನದ ಉಗ್ರರ ಗುಂಪು ಸೇರಲು ಹೊರಟಿದ್ದ ಜಮ್ಮು ಮತ್ತು ಕಾಶ್ಮೀರದ ಐವರು ಯುವಕರನ್ನು ಭಾರತೀಯ ಸೇನೆಯ (Indian Army) ಯೋಧರು ಹಾಗೂ ಪೊಲೀಸರು ರಕ್ಷಿಸಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ಅಪ್ರಾಪ್ತ ವಯಸ್ಸಿನವರು ಸೇರಿ ಒಟ್ಟು ಐವರನ್ನು ಉಗ್ರರು ತಮ್ಮತ್ತ ಸೆಳೆದುಕೊಳ್ಳಲು ಯತ್ನಿಸಿದ್ದರು. ಅವರ ಮನ ಪರಿವರ್ತನೆ ಮಾಡಿ, ಉಗ್ರ ಗುಂಪಿಗೆ ಸೇರಲು ಒಪ್ಪಿಸಿದ್ದರು. ಈ ವಿಚಾರವನ್ನು ತಿಳಿದುಕೊಂಡವರು ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: Shivamogga terror: ಉಗ್ರ ಚಟುವಟಿಕೆಗೆ PFI ಮುಖಂಡರಿಂದ ಗೇಮಿಂಗ್ ಆ್ಯಪ್ ಬಳಕೆ; ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗ್ಳೂರು ಕುಕ್ಕರ್ ಬ್ಲಾಸ್ಟ್‌ಗೂ ಲಿಂಕ್!
ಪೊಲೀಸರು ಮತ್ತು ಭಾರತೀಯ ಸೇನೆಯ 29 ರಾಷ್ಟ್ರೀಯ ರೈಫಲ್ಸ್ ತಂಡವು ಜಂಟಿಯಾಗಿ ಕಾರ್ಯಾಚರಣೆ ನಡೆಸಿತು. ಮೊದಲಿಗೆ ಮನೆ ಬಿಟ್ಟು ಹೋಗಿದ್ದ ಯುವಕರನ್ನು ಪತ್ತೆ ಹಚ್ಚಲಾಗಿದೆ. ನಂತರ ಕುಟುಂಬಸ್ಥರ ಸಮ್ಮುಖದಲ್ಲಿ ಅವರ ಸಮಾಲೋಚನೆ ನಡೆಸಲಾಗಿದೆ.
ಪಾಕಿಸ್ತಾನದಿಂದ ಹೊರಗಿರುವ ಪಾಕಿಸ್ತಾನಿ ಉಗ್ರರ ನಿಯಂತ್ರಕರು ತಮ್ಮನ್ನು ಉಗ್ರ ಗುಂಪಿಗೆ ಸೇರಲು ಮನ ಪರಿವರ್ತಿಸಿದ್ದಾಗಿ ಯುವಕರು ಯೋಧರ ಎದುರು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅವರು ಯುವಕರನ್ನು ಸಂಪರ್ಕಿಸಿದ್ದಾಗಿ ಹೇಳಲಾಗಿದೆ. ಯುವಕರಿಗೆ ಸಂಪೂರ್ಣವಾಗಿ ಸಮಾಲೋಚನೆ ನಡೆಸಿದ ನಂತರ ಅವರನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.