Site icon Vistara News

Indian Army Kite | ಪಾಕ್ ಡ್ರೋನ್ ಬೇಟೆಯಾಡಲು ನಮ್ಮ ಸೇನೆಯ ‘ಗಿಡುಗ’ ಸಜ್ಜು!

Indian Army Kite @ Uttarakhand

ಔಲಿ(ಉತ್ತರಾಖಂಡ): ವೈರಿ ರಾಷ್ಟ್ರದ ಡ್ರೋನ್‌ಗಳನ್ನು ನಾಶ ಮಾಡಲು ಭಾರತೀಯ ಸೇನೆ ವಿಶಿಷ್ಟ ದಾರಿಯನ್ನು ಕಂಡುಕೊಂಡಿದೆ. ಇದೇ ಮೊದಲ ಬಾರಿಗೆ ಈ ಕಾರ್ಯಕ್ಕೆ ಗಿಡುಗ(Indian Army Kite)ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಡ್ರೋನ್ ನಾಶ ಮಾಡುವ ತರಬೇತಿಯನ್ನು ಈ ಗಿಡುಗಗಳಿಗೆ ನೀಡಿ, ಉದ್ದೇಶಿತ ಕಾರ್ಯವನ್ನು ಸಾಧಿಸಲಾಗುತ್ತಿದೆ. ಭಾರತೀಯ ಸೇನೆಯ ಸೇನಾ ಕಾರ್ಯಾಚರಣೆ ವೇಳೆ, ನಾಯಿಗಳ ಜತೆಗೆ ಗಿಡುಗಗಳನ್ನೂ ಬಳಸಿಕೊಳ್ಳುತ್ತದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದಿಂದ ನಿತ್ಯವೂ ಗಡಿ ದಾಟಿ ಹಲವು ಡ್ರೋನ್‌ಗಳು ಹಾರಾಟ ನಡೆಸುತ್ತವೆ. ಗಡಿಯಲ್ಲಿರುವ ಯೋಧರು ಇವುಗಳನ್ನು ಹೊಡೆದುರುಳಿಸಿತ್ತಾರೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಗಡಿಯಲ್ಲಿ ವೈರಿ ರಾಷ್ಟ್ರದ ಡ್ರೋನ್ ಉಪಟಳ ಹೆಚ್ಚು. ಈ ಡ್ರೋನ್ ಮೂಲಕ ಪಾಕಿಸ್ತಾನವು ಭಾರತದೊಳಗೆ ಡ್ರಗ್ಸ್, ಗನ್ ಮತ್ತು ಹಣವನ್ನು ರವಾನಿಸುವ ಪ್ರಯತ್ನ ಮಾಡುತ್ತದೆ. ಇದೆಲ್ಲವೂ ಭಾರತದಲ್ಲಿ ಉಗ್ರ ಚಟುವಟಿಕೆಗೆ ಬಳಕೆಯಾಗುತ್ತದೆ. ಈ ಸಮಸ್ಯೆಯನ್ನು ನೀಗಿಸಲು ಭಾರತೀಯ ಸೇನೆ ಗಿಡುಗಗಳನ್ನು ಬಳಸಿಕೊಳ್ಳುತ್ತಿದೆ.

ಉತ್ತರಾಖಂಡ್‌ನ ಔಲಿಯಲ್ಲಿ ನಡೆಯುತ್ತಿರುವ ಭಾರತ-ಅಮೆರಿಕ ಜಂಟಿ ತರಬೇತಿ ಪ್ರದರ್ಶನ ‘ಯುದ್ಧ ಅಭ್ಯಾಸ’ದ ಸಮಯದಲ್ಲಿ ಭಾರತೀಯ ಸೇನೆಯು ಶತ್ರು ಡ್ರೋನ್‌ಗಳನ್ನು ಬೇಟೆಯಾಡಲು ಗಿಡುಗಗಳ ಬಳಕೆಯನ್ನು ಪ್ರದರ್ಶಿಸಿತು. ಭಾರತ-ಅಮೆರಿಕ ಜಂಟಿ ತರಬೇತಿ 18ನೇ ಆವೃತ್ತಿಯ “ಯುದ್ಧ ಅಭ್ಯಾಸ 22” ಶನಿವಾರ ಉತ್ತರಾಖಂಡದ ಔಲಿಯಲ್ಲಿ ಪ್ರಾರಂಭವಾಯಿತು. ಈ ಹಿಂದಿನ ಆವೃತ್ತಿಯ ಅಭ್ಯಾಸ ಪ್ರದರ್ಶನವನ್ನು 2021ರ ಅಕ್ಟೋಬರ್‌ನಲ್ಲಿ ಅಲಾಸ್ಕಾದ (ಯುಎಸ್) ಜಂಟಿ ಬೇಸ್ ಎಲ್ಮೆಂಡಾರ್ಫ್ ರಿಚರ್ಡ್‌ಸನ್‌ನಲ್ಲಿ ನಡೆಸಲಾಗಿತ್ತು.

ಇದನ್ನೂ ಓದಿ | ಪಾಕಿಸ್ತಾನದಿಂದ ಬಂದ ಮತ್ತೊಂದು ಡ್ರೋನ್​​; ಫೈರಿಂಗ್​ ಮಾಡಿ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ ಸಿಬ್ಬಂದಿ

Exit mobile version