ನವದೆಹಲಿ: ಭಾರತ ಹಾಗೂ ಚೀನಾ ನಡುವಿನ ಗಡಿ ನಿಯಂತ್ರಣ ರೇಖೆ (LAC) ಬಳಿ 2020ರಿಂದಲೂ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸುವ ಮೂಲಕ ಉದ್ಧಟತನ (India China Conflict) ಮಾಡುತ್ತಿರುವ ಚೀನಾ ಸೈನಿಕರ ಉಪಟಳ ಇನ್ನಷ್ಟು ಜಾಸ್ತಿಯಾಗಿದೆ. ಅದರಲ್ಲೂ, 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಭಾರಿ ಸಂಘರ್ಷ (Galwan Clash) ಉಂಟಾದ ಬಳಿಕವೂ ಎರಡು ಬಾರಿ ಉಭಯ ಸೈನಿಕರ ಮಧ್ಯೆ ಭಾರಿ ಗಲಾಟೆ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.
ಭಾರತ ಹಾಗೂ ಚೀನಾದ ಪಿಎಲ್‌ಎ ಸೈನಿಕರ ಮಧ್ಯೆ 2021ರ ಸೆಪ್ಟೆಂಬರ್ ಹಾಗೂ 2022ರ ನವೆಂಬರ್‌ನಲ್ಲಿ ಭಾರಿ ಗಲಾಟೆ ನಡೆದಿದೆ. ಆದರೆ, ಸಂಘರ್ಷದಲ್ಲಿ ಭಾರತದ ಸೈನಿಕರಿಗೆ ಯಾವ ರೀತಿ ಹಾನಿಯಾಗಿದೆ, ಭಾರತೀಯ ಸೈನಿಕರ ತಿರುಗೇಟಿಗೆ ಚೀನಾ ಸೈನಿಕರಿಗೆ ಏನಾಯಿತು ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹಾಗೆಯೇ, ಉಭಯ ದೇಶಗಳ ಸೈನಿಕರ ಸಂಘರ್ಷದ ಕುರಿತು ಭಾರತೀಯ ಸೇನೆಯು ಇದುವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ವರದಿಗಳ ಪ್ರಕಾರ ಎರಡು ಬಾರಿ ಮಾತ್ರ ಸಂಘರ್ಷ ನಡೆದಿದೆ ಎನ್ನಲಾಗಿದೆ.
2020ರ ಮೇ 5ರಂದು ಚೀನಾ ಲಡಾಕ್ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸುವ ಮೂಲಕ ಉದ್ಧಟತನ ಆರಂಭಿಸಿದೆ. ಇದೇ ವರ್ಷದ ಜೂನ್‌ನಲ್ಲಿ ಗಲ್ವಾನ್‌ನಲ್ಲಿ ಉಭಯ ರಾಷ್ಟ್ರಗಳ ಸೈನಿಕರ ಮಧ್ಯೆ ಸಂಘರ್ಷ ನಡೆದಿತ್ತು. ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾದ ಪಿಎಲ್‌ಎ ಸೈನಿಕರೊಂದಿಗೆ ನಡೆದ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಹಾಗೆಯೇ, ಭಾರತೀಯ ಸೈನಿಕರು ನೀಡಿದ ತಿರುಗೇಟಿಗೆ ಚೀನಾದ ಹಲವು ಯೋಧರು ಕೂಡ ಬಲಿಯಾಗಿದ್ದರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತ ವಿರುದ್ಧ ಚೀನಾ ಕೈಗೊಂಬೆ ಮಾಲ್ಡೀವ್ಸ್ ಉದ್ಧಟತನ, ಇದೆಲ್ಲ ಎಷ್ಟು ದಿನ?
ಭಾರತವು ಗಡಿಯಲ್ಲಿರುವ 3,488 ಕಿಲೋಮೀಟರ್ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿದೆ. ಹಾಗೆಯೇ, ಯುದ್ಧವಿಮಾನ ಸೇರಿ ಹಲವು ಮೂಲ ಸೌಕರ್ಯಗಳನ್ನು ಗಡಿಯಲ್ಲಿ ಒದಗಿಸಿದೆ. ಗಲ್ವಾನ್ ಗಡಿ ಸಂಘರ್ಷದ ಬಳಿಕ ಭಾರತ ಹಾಗೂ ಚೀನಾ ಮಧ್ಯೆ ಹಲವು ಬಾರಿ ಮಾತುಕತೆ ನಡೆದರೂ, ಶಾಂತಿ ಒಪ್ಪಂದಕ್ಕೆ ಸಿದ್ಧ ಎಂದು ಹೇಳುವ ಚೀನಾ ಗಡಿಯಲ್ಲಿ ಮಾತ್ರ ಉಪಟಳ ನಿಲ್ಲಿಸಿಲ್ಲ. ಇದರಿಂದಾಗಿ ಲಡಾಕ್ ಗಡಿಯಲ್ಲಿ ಯಾವಾಗಲೂ ಬಿಗುವಿನ ವಾತಾವರಣ ಇರುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ