Site icon Vistara News

ಬಾಲಕಿಯ ಪ್ರಾಣ ಉಳಿಸಲು 7 ಲಕ್ಷ ರೂ. ಜಿಎಸ್‌ಟಿ ಬಿಟ್ಟ ಕೇಂದ್ರ, ಮಾನವೀಯತೆ ಮೆರೆದ ಶಶಿ ತರೂರ್‌

Indian govt let go of Rs 7 lakh in GST to save a baby girl’s life

Indian govt let go of Rs 7 lakh in GST to save a baby girl’s life

ನವದೆಹಲಿ/ತಿರುವನಂತಪುರಂ: ಜನರಿಂದ ಆಯ್ಕೆಯಾದ ಜನಪ್ರತಿನಿಧಿಗೆ ಮಾನವೀಯತೆ ಇದ್ದರೆ, ಆಳುವ ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇದ್ದರೆ ಏನೆಲ್ಲ ಆಗುತ್ತದೆ ಎಂಬುದಕ್ಕೆ ನಿದರ್ಶನ ಸಿಕ್ಕಿದೆ. ಹೌದು, ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕಿಯೊಬ್ಬಳ ಪ್ರಾಣ ಉಳಿಸಲು ಕೇಂದ್ರ ಸರ್ಕಾರವು 7 ಲಕ್ಷ ರೂಪಾಯಿ ಜಿಎಸ್‌ಟಿಗೆ ವಿನಾಯಿತಿ ನೀಡಿದರೆ, ಬಾಲಕಿಗೆ ಅಗತ್ಯ ನೆರವಿನ ವ್ಯವಸ್ಥೆ ಮಾಡಿಸುವ ಮೂಲಕ ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮಾನವೀಯತೆ ಮೆರೆದಿದ್ದಾರೆ.

ನಿಹಾರಿಕಾ ಎಂಬ ಬಾಲಕಿಯು ನ್ಯೂರೋಬ್ಲಾಸ್ಟೋಮಾ (Neuroblastoma) ಎಂಬ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಕ್ಯಾನ್ಸರ್‌ ಈಕೆಗೆ ನಾಲ್ಕನೇ ಸ್ಟೇಜ್‌ನಲ್ಲಿದೆ. ಬಾಲಕಿಯ ಪ್ರಾಣ ಉಳಿಸಲು ಡಿನುಟುಕ್ಸಿಮ್ಯಾಬ್‌ ಬೆಟಾ (Dinutuximab Beta) ಅಥವಾ ಕರ್ಜಿಬಾ (Qarziba) ಎಂಬ ಇಂಜೆಕ್ಷನ್‌ ನೀಡಬೇಕು. ಈ ಇಂಜೆಕ್ಷನ್‌ನ ಒಂದು ಬಾಟಲಿಗೆ 10 ಲಕ್ಷ ರೂಪಾಯಿ ಇದ್ದು, ಇದನ್ನು ವಿದೇಶದಿಂದ ತರಿಸಬೇಕು. ಹೀಗೆ, ತರಿಸಿದ ಇಂಜೆಕ್ಷನ್‌ ಬೆಲೆ ಒಟ್ಟು 63 ಲಕ್ಷ ರೂಪಾಯಿ ಆಗಿದೆ. ಇದಕ್ಕೆ 7 ಲಕ್ಷ ರೂಪಾಯಿ ಜಿಎಸ್‌ಟಿ ಕಟ್ಟಬೇಕಿರುತ್ತದೆ. ಆದರೆ, ನಿಹಾರಿಕಾಳ ಕುಟುಂಬ ಸಂಕಷ್ಟದಲ್ಲಿರುವ ಕಾರಣ ಇಷ್ಟೊಂದು ಮೊತ್ತ ಭರಿಸಲು ಆಗುತ್ತಿರಲಿಲ್ಲ.

ಶಶಿ ತರೂರ್‌ ಪತ್ರ

ನೆರವಿಗೆ ಧಾವಿಸಿದ ಶಶಿ ತರೂರ್‌

ನಿಹಾರಿಕಾ ಕುಟುಂಬದ ಸಂಕಷ್ಟ ಅರಿತ ಶಶಿ ತರೂರ್‌ ಅವರು ನೆರವಿಗೆ ಧಾವಿಸಿದ್ದಾರೆ. ಮಾನವೀಯತೆ ಆಧಾರದ ಮೇಲೆ 7 ಲಕ್ಷ ರೂಪಾಯಿ ಜಿಎಸ್‌ಟಿ ಮನ್ನಾ ಮಾಡಬೇಕು ಎಂಬುದಾಗಿ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆಯುತ್ತಾರೆ. ಆದರೆ, ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಮತ್ತೊಂದೆಡೆ, ಔಷಧವು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು, ತೆರಿಗೆ ಕಟ್ಟದಿದ್ದರೆ ಅದನ್ನು ನೀಡುವುದಿಲ್ಲ ಎಂಬುದಾಗಿ ಕಸ್ಟಮ್ಸ್‌ ಅಧಿಕಾರಿಗಳು ಹೇಳುತ್ತಾರೆ. ಆದರೂ ಪ್ರಯತ್ನ ಬಿಡದ ಶಶಿ ತರೂರ್‌ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ನೇರವಾಗಿ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರು ಜಿಎಸ್‌ಟಿ ವಿನಾಯಿತಿ ನೀಡಲು ಒಪ್ಪಿ, ಕೊನೆಗೆ ಮಾರ್ಚ್‌ 28ರಂದು ಔಷಧಿಯು ನಿಹಾರಿಕಾ ಕುಟುಂಬಸ್ಥರ ಕೈ ಸೇರುತ್ತದೆ.

ಇದನ್ನೂ ಓದಿ: Karwar News: ನಿತ್ರಾಣಗೊಂಡಿದ್ದ ಭಿಕ್ಷುಕನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಾರಿಗೆ ಸಿಬ್ಬಂದಿ

ಸೀತಾರಾಮನ್‌ಗೆ ತರೂರ್‌ ಧನ್ಯವಾದ

ಇಡೀ ಘಟನೆಯನ್ನು ಶಶಿ ತರೂರ್‌ ಅವರು ಪತ್ರದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. “ಪುಟ್ಟ ಬಾಲಕಿಗೆ ಈಗ ಇಂಜೆಕ್ಷನ್‌ ಸಿಗಲಿದೆ. ಆಕೆ ಬದುಕುಳಿಯಲಿದ್ದಾಳೆ. ಕೇಂದ್ರ ಸರ್ಕಾರವು ಏಳು ಲಕ್ಷ ರೂಪಾಯಿ ಆದಾಯವನ್ನು ಬಿಟ್ಟಿದೆ. ನಿರ್ಮಲಾ ಸೀತಾರಾಮನ್‌ ಅವರಿಗೆ ಧನ್ಯವಾದಗಳು. ರಾಜಕೀಯದ ಹೊರತಾಗಿಯೂ ನೀವು ಮಾನವೀಯತೆ ಮೆರೆದಿದ್ದೀರಿ. ಸರ್ಕಾರದ ಮೇಲೆ ನಾನು ಇಟ್ಟಿರುವ ನಂಬಿಕೆಯನ್ನು ಹೆಚ್ಚಿಸಿದ್ದೀರಿ” ಎಂಬುದಾಗಿ ಭಾವುಕರಾಗಿ ಸಚಿವೆಗೆ ಧನ್ಯವಾದ ತಿಳಿಸಿದ್ದಾರೆ. ಶಶಿ ತರೂರ್‌ ಪೋಸ್ಟಿಗೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದು, ಸಂಸದ ಹಾಗೂ ನಿರ್ಮಲಾ ಸೀತಾರಾಮನ್‌ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ.

Exit mobile version