ಹೊಸದಿಲ್ಲಿ: ಭಾರತದ ನ್ಯಾಷನಲ್ ಮೆಡಿಕಲ್ ಕಮಿಷನ್‌ಗೆ (NMC) ವಿಶ್ವ ವೈದ್ಯಕೀಯ ಶಿಕ್ಷಣ ಫೆಡರೇಶನ್ (WFME) 10 ವರ್ಷಗಳ ಅವಧಿಯ ಮಾನ್ಯತೆ ಸ್ಥಾನಮಾನ ನೀಡಿದೆ. ಇದರಿಂದಾಗಿ ಇನ್ನು ಮುಂದೆ ಭಾರತೀಯ ವೈದ್ಯಕೀಯ ಪದವೀಧರರು (Indian Medical graduates) ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ತರಬೇತಿ ಮತ್ತು ಪ್ರಾಕ್ಟೀಸ್ ಮಾಡಬಹುದಾಗಿದೆ.
ಇದನ್ನು ಭಾರತೀಯ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ 706 ವೈದ್ಯಕೀಯ ಕಾಲೇಜುಗಳು WFME ಮಾನ್ಯತೆ ಪಡೆಯುತ್ತವೆ ಎಂದು ಸಚಿವಾಲಯ ಹೇಳಿದೆ. “ಈ ಮಾನ್ಯತೆಯ ಭಾಗವಾಗಿ, ಭಾರತದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ 706 ವೈದ್ಯಕೀಯ ಕಾಲೇಜುಗಳು WFME ಮಾನ್ಯತೆ ಪಡೆಯುತ್ತವೆ. ಮುಂಬರುವ 10 ವರ್ಷಗಳಲ್ಲಿ ಸ್ಥಾಪಿಸಲಾಗುವ ಹೊಸ ವೈದ್ಯಕೀಯ ಕಾಲೇಜುಗಳೂ ಸ್ವಯಂಚಾಲಿತವಾಗಿ WFME ಮಾನ್ಯತೆ ಪಡೆಯುತ್ತವೆ. ಜಾಗತಿಕ ಉತ್ತಮ ಅಭ್ಯಾಸಗಳು ಮತ್ತು ಮಾನದಂಡಗಳೊಂದಿಗೆ ಅವುಗಳನ್ನು ಜೋಡಿಸುವ ಮೂಲಕ ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಈ ಮನ್ನಣೆಯು ಮತ್ತಷ್ಟು ಹೆಚ್ಚಿಸಲಿದೆ” ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಈ ಮಾನ್ಯತೆಯಿಂದಾಗಿ ಶೈಕ್ಷಣಿಕ ಸಹಯೋಗಗಳು ಮತ್ತು ವಿನಿಮಯಗಳನ್ನು ಸುಲಭಗೊಳಿಸಲು ಸಹಾಯವಾಗಲಿದೆ. ವೈದ್ಯಕೀಯ ಶಿಕ್ಷಣದಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು, ವೈದ್ಯಕೀಯ ಶಿಕ್ಷಕರು ಮತ್ತು ಸಂಸ್ಥೆಗಳಲ್ಲಿ ಗುಣಮಟ್ಟದ ಸಂಸ್ಕೃತಿಯನ್ನು ಬೆಳೆಸಲು ಇದು ಸಹಾಯ ಮಾಡಲಿದೆ ಎಂದು ಸಚಿವಾಲಯ ಹೇಳಿದೆ.
ವರ್ಲ್ಡ್ ಫೆಡರೇಶನ್ ಫಾರ್ ಮೆಡಿಕಲ್ ಎಜುಕೇಶನ್ (WFME) ವಿಶ್ವಾದ್ಯಂತ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮೀಸಲಾಗಿರುವ ಜಾಗತಿಕ ಸಂಸ್ಥೆ. WFMEಯ ಮಾನ್ಯತೆ ಕಾರ್ಯಕ್ರಮವು ವೈದ್ಯಕೀಯ ಸಂಸ್ಥೆಗಳು ಶಿಕ್ಷಣ ಮತ್ತು ತರಬೇತಿಯ ಅತ್ಯುನ್ನತ ಅಂತರಾಷ್ಟ್ರೀಯ ಮಾನದಂಡಗಳನ್ನು ಪೂರೈಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
“WFMEಯ ಮಾನ್ಯತೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವು ಜಾಗತಿಕ ಮಾನದಂಡಗಳಿಗೆ ಬದ್ಧವಾಗಿದೆ ಎಂದು ಒತ್ತಿಹೇಳುತ್ತದೆ. ಈ ಪುರಸ್ಕಾರವು ನಮ್ಮ ವಿದ್ಯಾರ್ಥಿಗಳಿಗೆ ವಿಶ್ವದಲ್ಲಿ ಎಲ್ಲಿಯೂ ತಮ್ಮ ವೃತ್ತಿಜೀವನ ನಡೆಸಲು ಅವಕಾಶ ನೀಡುತ್ತದೆ. ಜಾಗತಿಕವಾಗಿ ಮಾನ್ಯತೆ ಪಡೆದ ಮಾನದಂಡಗಳಿಂದಾಗಿ ಭಾರತವನ್ನು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಆಕರ್ಷಕಗೊಳಿಸಲಿದೆ” ಎಂದು ಎನ್‌ಎಂಸಿಯ ಮಾಧ್ಯಮ ವಿಭಾಗ ಮುಖ್ಯಸ್ಥ ಡಾ. ಯೋಗೇಂದರ್ ಮಲಿಕ್ ಹೇಳಿದ್ದಾರೆ.
ಇದನ್ನೂ ಓದಿ: Junior Veterinary Examiner 2022 | ಕಿರಿಯ ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗೆ ಜ.22ಕ್ಕೆ ಲಿಖಿತ ಪರೀಕ್ಷೆ