ಗ್ಯಾಂಗ್ಟಕ್: ಪ್ರವಾಹ ಪೀಡಿತ ಸಿಕ್ಕಿಂನಲ್ಲಿ ತೀಸ್ತಾ ನದಿಗೆ (Teesta river) ಹದಿನೆಂಟೇ ದಿನಗಳಲ್ಲಿ ಸೇತುವೆಯೊಂದನ್ನು ನಿರ್ಮಿಸಿ ಇಂಡಿಯನ್ ಆರ್ಮಿ (Indian Military) ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ಅಕ್ಟೋಬರ್ 4ರಂದು ಉಂಟಾದ ಹಠಾತ್ ಪ್ರವಾಹದಿಂದ (Sikkim flood) ಉತ್ತರ ಸಿಕ್ಕಿಂ ತತ್ತರಗೊಂಡಿತ್ತು. ತೀಸ್ತಾ ನದಿಯ ಪ್ರವಾಹದಲ್ಲಿ ಮಂಗನ್ ಮತ್ತು ಚುಂಗ್ಥಾಂಗ್ ನಡುವಿನ ಬೈಲಿ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಸ್ಥಳೀಯರಿಗೆ ಸಂಪರ್ಕವೇ ಇಲ್ಲದಂತಾಗಿತ್ತು. ಇದೀಗ 18 ದಿನಗಳ ನಿರಂತರ ಪರಿಶ್ರಮದ ಬಳಿಕ ಸೇನೆಯ ತ್ರಿಶಕ್ತಿ ಕಾರ್ಪ್ಸ್, ಬೈಲಿ ಸೇತುವೆಯನ್ನು ಮರಳಿ ಕಟ್ಟಿಕೊಟ್ಟಿದೆ.
ತೀಸ್ತಾ ನದಿಯಲ್ಲಿ ಬಂದ ಹಠಾತ್ ಪ್ರವಾಹವು 90ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ದುರಂತದ ಸಮಯದಲ್ಲಿ 23 ಸೇನಾ ಸಿಬ್ಬಂದಿ, ವಾಹನಗಳು ಮತ್ತು ಮದ್ದುಗುಂಡುಗಳ ಪೆಟ್ಟಿಗೆಗಳು ಪಾಕ್ಯೊಂಗ್ ಜಿಲ್ಲೆಯ ಬರ್ಡಾಂಗ್‌ನಲ್ಲಿರುವ ಶಿಬಿರದಿಂದ ಕೊಚ್ಚಿಹೋಗಿದ್ದವು. ಧ್ವಂಸಗೊಂಡ ಮಾರ್ಗಗಳನ್ನು ಮರಳಿ ಸ್ಥಾಪಿಸಲು ಸ್ಥಳೀಯ ಜನರಿಗೆ ಸೇನೆ ಸಹಾಯ ಮಾಡುತ್ತಿದೆ.
“ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಮುಖ್ಯ ಮಂಗನ್-ತುಂಗ್-ಚುಂಗ್‌ಥಾಂಗ್ ಮಾರ್ಗವನ್ನು ಮರುಸಂಪರ್ಕಿಸಲು ಪ್ರಯತ್ನಿಸುತ್ತಿದೆ. ತ್ರಿಶಕ್ತಿ ಕಾರ್ಪ್ಸ್ ಪಡೆಗಳು BRO, ಸ್ಥಳೀಯರು ಮತ್ತು ನಾಗರಿಕ ಆಡಳಿತದ ಸಹಾಯದೊಂದಿಗೆ ಪರ್ಯಾಯ ಮಂಗನ್-ಸಂಕ್ಲಾಂಗ್-ಥೇಂಗ್-ಚುಂಗ್‌ಥಾಂಗ್ ಮಾರ್ಗವನ್ನು ತೆರೆಯಲು ಪ್ರಯತ್ನಿಸುತ್ತಿದೆ. ಮಂಗನ್-ಸಂಕ್ಲಾಂಗ್ ಕ್ರಾಸಿಂಗ್‌ನಲ್ಲಿ ತೀಸ್ತಾ ನದಿಯ ಮೇಲೆ ಎರಡು ಬೈಲಿ ಸೇತುವೆಗಳನ್ನು ನಿರ್ಮಿಸುವ ಅಗತ್ಯವಿದೆ. ಹಗಲಿರುಳು ಕೆಲಸ ಮಾಡುತ್ತಿದ್ದು, ಅಕ್ಟೋಬರ್ 22ರಂದು ಬೆಳಿಗ್ಗೆ 11 ಗಂಟೆಗೆ ಮೊದಲ ಸೇತುವೆ ಪೂರ್ಣಗೊಂಡಿದೆʼʼ ಎಂದು ಪ್ರದೇಶದ ಸೇನೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ತಿಳಿಸಿದ್ದಾರೆ.
ಉತ್ತರ ಸಿಕ್ಕಿಂನಲ್ಲಿ ಹಲವು ಭೂಭಾಗಗಳು ಸಮಪರ್ಕ ಕಳೆದುಕೊಂಡಿವೆ. ತಕ್ಷಣಕ್ಕೆ ಚುಂಗ್ಥಾಂಗ್ ಮತ್ತು ಸಂಕ್ಲಾಂಗ್-ಮಂಗನ್ ಕ್ರಾಸಿಂಗ್‌ನಲ್ಲಿ ಕಾಲು ಸೇತುವೆಗಳು ಮತ್ತು ಜಿಪ್ ಲೈನ್‌ಗಳನ್ನು ನಿರ್ಮಿಸಲಾಯಿತು. ಇದು ಜನರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ ಮತ್ತು ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಅವಕಾಶ ಕಲ್ಪಿಸಿದೆ. ಮುಖ್ಯ ಮಂಗನ್-ತುಂಗ್-ಚುಂಗ್ತಾಂಗ್ ರಸ್ತೆಗೆ ದೊಡ್ಡ ಪ್ರಮಾಣದ ಹಾನಿಯಾಗಿರುವುದರಿಂದ, ಹಾನಿಗೊಳಗಾದ ಸೇತುವೆಯ ಸ್ಥಳವನ್ನು ಸಮೀಪಿಸಲು ಮತ್ತು ಹೊಸ ಸೇತುವೆಯನ್ನು ನಿರ್ಮಿಸುವ ಮೊದಲು ನಾಗಾ ಗ್ರಾಮದ ಮೂಲಕ ರಸ್ತೆಯ ಹೊಸ ಜೋಡಣೆಯನ್ನು ಮಾಡಲಾಗುತ್ತಿದೆ.
ಧಾರಾಕಾರ ಮಳೆಯ ನಂತರ ದಕ್ಷಿಣ ಲೊನಾಕ್‌ನಲ್ಲಿರುವ ಹಿಮನದಿ ಸರೋವರ ಅಕ್ಟೋಬರ್ 4ರ ಮುಂಜಾನೆ ಉಕ್ಕಿ ಹರಿದಿತ್ತು. ಸಿಕ್ಕಿಂನ ಜೀವನಾಡಿ NH-10 ಸೇರಿದಂತೆ ಮಾನವ ವಸತಿಗಳು, ಸೇನಾ ಶಿಬಿರ, ಹಲವಾರು ಜಲವಿದ್ಯುತ್ ಅಣೆಕಟ್ಟುಗಳು ಮತ್ತು ಪ್ರಮುಖ ರಸ್ತೆಗಳನ್ನು ಸೊಕ್ಕಿದ ತೀಸ್ತಾ ನದಿ ನಾಶಪಡಿಸಿತ್ತು. ಪ್ರವಾಹ 90ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. 23 ಸೇನಾ ಸಿಬ್ಬಂದಿ, ವಾಹನಗಳು ಮತ್ತು ಮದ್ದುಗುಂಡುಗಳ ಪೆಟ್ಟಿಗೆಗಳು ಪಾಕ್ಯೊಂಗ್ ಜಿಲ್ಲೆಯ ಬರ್ಡಾಂಗ್‌ನಲ್ಲಿರುವ ಶಿಬಿರದಿಂದ ಕೊಚ್ಚಿಹೋಗಿದ್ದವು. ನಾಪತ್ತೆಯಾದ ವ್ಯಕ್ತಿಗಳಲ್ಲಿ ಒಬ್ಬರು ಮಾತ್ರ ಜೀವಂತವಾಗಿ ಪತ್ತೆಯಾಗಿದ್ದಾರೆ. 10 ಸೈನಿಕರ ಶವಗಳನ್ನು ಮಾತ್ರ ಪತ್ತೆಹಚ್ಚಲಾಗಿದೆ.
ಇದನ್ನೂ ಓದಿ: ಸಿಕ್ಕಿಂ ದಿಢೀರ್ ಪ್ರವಾಹ; ವಾರದ ಬಳಿಕ ಭಾರೀ ಸಾಹಸಪಟ್ಟು ಇಡೀ ಹಳ್ಳಿಯನ್ನು ರಕ್ಷಿಸಿದ ‘ತ್ರಿಶಕ್ತಿ’ ಸೇನಾ ತಂಡ