ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಅಲ್ಲಿನ ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ಮೊಹಮ್ಮದ್ ರಹಮತುಲ್ಲಾ ಸೈಯದ್ ಅಹಮದ್ (32) ಮೃತನಾಗಿದ್ದು, ಈತ ಮೂಲತಃ ತಮಿಳುನಾಡಿನವನು ಎಂದು ಹೇಳಲಾಗಿದೆ. ಬ್ರಿಜಿಂಗ್ ವೀಸಾ (ಆಸ್ಟ್ರೇಲಿಯಾದಲ್ಲಿ ತಾತ್ಕಾಲಿಕವಾಗಿ ವಾಸಿಸಲು ಕೊಡುವ ವೀಸಾ) ಆಧಾರದ ಮೇಲೆ ಈತ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ. ಮೊಹಮ್ಮದ್ ರಹಮತುಲ್ಲಾ ಸೈಯದ್ ಅಹಮದ್ ಮಂಗಳವಾರ ಸಿಡ್ನಿ ರೈಲ್ವೆ ಸ್ಟೇಶನ್ನಲ್ಲಿ ಅಲ್ಲಿನ ಕ್ಲೀನರ್ಗೆ ಚಾಕುವಿನಿಂದ ಇರಿದಿದ್ದಾನೆ. ಅಷ್ಟೇ ಅಲ್ಲ, ಕಾನೂನು ಜಾರಿ ಅಧಿಕಾರಿಗಳ ಮೇಲೆ ಕೂಡ ದಾಳಿಗೆ ಮುಂದಾಗಿದ್ದಾನೆ. ಹಾಗಾಗಿ ಶೂಟ್ ಮಾಡಿದ್ದಾಗಿ ಪೊಲೀಸರು ಹೇಳಿಕೊಂಡಿದ್ದಾರೆ.
ಈ ಘಟನೆಯನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಧೂತಾವಾಸ ಕಚೇರಿ ಖಂಡಿಸಿದೆ. ‘ಇದು ಅತ್ಯಂದ ಕಳವಳಕಾರಿ ಮತ್ತು ದುರದೃಷ್ಟಕರ ಘಟನೆ. ನಾವು ವಿದೇಶಾಂಗ ವ್ಯವಹಾರಗಳು ಮತ್ತು ವ್ಯಾಪಾರ ಇಲಾಖೆ ಗಮನಕ್ಕೆ ಈ ವಿಚಾರವನ್ನು ತರುತ್ತೇವೆ, ಆಸ್ಟ್ರೇಲಿಯಾ ಪೊಲೀಸ್ ಮುಖ್ಯ ಕಚೇರಿ ಬಳಿಯೂ ಪ್ರಸ್ತಾಪ ಮಾಡುತ್ತೇವೆ ಎಂದು ರಾಯಭಾರಿ ಕಚೇರಿ ಹೇಳಿಕೊಂಡಿದೆ.
ಸಿಡ್ನಿಯಲ್ಲಿರುವ ಆಬರ್ನ್ ರೈಲ್ವೆ ಸ್ಟೇಶನ್ನಲ್ಲಿ 28ವರ್ಷದ ಕ್ಲೀನರ್ಗೆ ಅಹ್ಮದ್ ಚಾಕುವಿನಿಂದ ಇರಿದ. ಕೂಡಲೇ ರೈಲ್ವೆ ನಿಲ್ದಾಣದಲ್ಲಿರುವ ಭದ್ರತಾ ಸಿಬ್ಬಂದಿ ಅವನನ್ನು ಆಬರ್ನ್ ಪೊಲೀಸ್ ಠಾಣೆಗೆ ಕರೆದೊಯ್ದರು. ಅದೇ ವೇಳೆ ಠಾಣೆಯಿಂದ ಹೊರಬರುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕೂಡ ಅಹ್ಮದ್ ದಾಳಿಗೆ ಮುಂದಾದ. ಆಗ ಪೊಲೀಸ್ ಅಧಿಕಾರಿಯೊಬ್ಬ ಅಹ್ಮದ್ಗೆ ಮೂರು ಗುಂಡು ಹಾರಿಸಿದ್ದಾನೆ. ಎರಡು ಗುಂಡು ಅಹ್ಮದ್ ಎದೆಗೆ ಬಿದ್ದಿದ್ದರೆ, ಮತ್ತೊಂದು ಗುಂಡು ಅವನ ಕಾಲಿಗೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಆತನನ್ನು ಪೊಲೀಸರೇ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈತ ಈ ಹಿಂದೆ ಐದು ಬಾರಿ ಪೊಲೀಸರ ವಿಚಾರಣೆ ಒಳಪಟ್ಟಿದ್ದ. ಅಷ್ಟೂ ಬಾರಿ ಕೊರೊನಾ ಸಂಬಂಧಿತ ನಿಯಮಗಳ ಉಲ್ಲಂಘನೆ ಕುರಿತಂತೆ ಹೊರತು, ಇವನಿಗೆ ಯಾವುದೇ ಕ್ರಿಮಿನಲ್ ಹಿಸ್ಟರಿ ಇಲ್ಲ ಎಂದೂ ಹೇಳಲಾಗಿದೆ.
ಇದನ್ನೂ ಓದಿ: T20 World Cup : ದಕ್ಷಿಣ ಆಫ್ರಿಕಾ ಮಣಿಸಿ 6ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾದ ಮಹಿಳೆಯರು
ಅಹ್ಮದ್ನಿಂದ ಗಾಯಗೊಂಡ ರೈಲ್ವೆ ಸ್ಟೇಶನ್ನ ಕ್ಲೀನರ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕ್ಲೀನರ್ ಮತ್ತು ಅಹ್ಮದ್ ಪರಿಚಯಸ್ಥರು ಅಲ್ಲ. ಮಂಗಳವಾರ ಅಹ್ಮದ್ ಸಿಡ್ನಿ ರೈಲ್ವೆ ಸ್ಟೇಶನ್ಗೆ ಬಂದಾಗ ಅವನ ಮೇಲೆ ದಾಳಿ ಮಾಡಿದ. ನೆಲಕ್ಕೆ ಬಿದ್ದ ಅವನನ್ನು ಚಾಕುವಿನಿಂದ ಇರಿದ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.