Site icon Vistara News

INS Mormugao | ದೇಶೀಯ ನಿರ್ಮಿತ, ಕ್ಷಿಪಣಿ ನಾಶಕ ಐಎನ್‌ಎಸ್‌ ಮೊರ್ಮುಗಾವೋಗೆ ಚಾಲನೆ, ಏನಿದರ ವೈಶಿಷ್ಟ್ಯ?

INS Mormugao

ಮುಂಬೈ: ಹಿಂದೂ ಮಹಾಸಾಗರದಲ್ಲಿ ಉಪಟಳ ಮಾಡುವ ಚೀನಾಗೆ ತಕ್ಕ ಪಾಠ ಕಲಿಸಲು, ಹೆಚ್ಚಿನ ನಿಗಾ ಇಡಲು ಭಾರತೀಯ ನೌಕಾಪಡೆಗೆ ಹೆಚ್ಚಿನ ಬಲ ಬಂದಿದೆ. ದೇಶೀಯ ನಿರ್ಮಿತ, ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲ ಐಎನ್‌ಎಸ್‌ ಮೊರ್ಮುಗಾವೋ ಯುದ್ಧನೌಕೆಯನ್ನು ಭಾನುವಾರ ಮುಂಬೈನಲ್ಲಿ (INS Mormugao) ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ನೌಕಾಪಡೆಯ ಸಾಮರ್ಥ್ಯ ಇಮ್ಮಡಿಯಾದಂತಾಗಿದೆ.

ಐಎನ್‌ಎಸ್‌ ಮೊರ್ಮುಗಾವೋಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಚಾಲನೆ ನೀಡಿದರು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಸಿಡಿಎಸ್‌ ಅನಿಲ್‌ ಚೌಹಾಣ್‌, ನೌಕಾಪಡೆ ಮುಖ್ಯಸ್ಥ ಆರ್‌.ಹರಿಕುಮಾರ್‌, ಗೋವಾ ರಾಜ್ಯಪಾಲ ಪಿ.ಎಸ್‌.ಶ್ರೀಧರನ್‌ ಪಿಳ್ಳೈ, ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸೇರಿ ಹಲವು ಗಣ್ಯರ ಉಪಸ್ಥಿತಿಯಲ್ಲಿ ಯುದ್ಧನೌಕೆಯನ್ನು ಸಾಗರ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ. ಸೇರ್ಪಡೆ ಬಳಿಕ ಮಾತನಾಡಿದ ರಾಜನಾಥ್‌ ಸಿಂಗ್‌, “ದೇಶೀಯವಾಗಿ ಯುದ್ಧನೌಕೆಗಳ ನಿರ್ಮಾಣ ಭಾರತದ ಗುರಿಯಾಗಿದೆ. ಇದೇ ದಿಸೆಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಮೊರ್ಮುಗಾವೋ ನೌಕೆಯನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಭಾರತದ ಪಾಲಿಗೆ ಇದು ಐತಿಹಾಸಿಕ ದಿನ” ಎಂದು ತಿಳಿಸಿದರು.

ಐಎನ್‌ಎಸ್‌ ಯುದ್ಧನೌಕೆಯ ಪ್ರಮುಖ ಅಂಶಗಳು
1. ಯುದ್ಧನೌಕೆಯು 163 ಮೀಟರ್‌ ಉದ್ದ, 17 ಮೀಟರ್‌ ಅಗಲವಿದೆ. ಹಾಗೆಯೇ, ಇದು 7,400 ಟನ್‌ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

2. ಇದು ವಿಶಾಖಪಟ್ಟಣಂ ಕ್ಷಿಪಣಿ ನಾಶಕದ ಮಾದರಿಯ ನಾಲ್ಕು ಯುದ್ಧನೌಕೆಗಳಲ್ಲಿ ಎರಡನೆಯದ್ದಾಗಿದೆ. ಮಜಗಾಂವ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ ಇದನ್ನು ನಿರ್ಮಿಸಿದ್ದು, ಒಟ್ಟು 35,800 ಕೋಟಿ ರೂ. ಖರ್ಚಾಗಿದೆ.

3. ರಾಸಾಯನಿಕ, ಅಣ್ವಸ್ತ್ರ ದಾಳಿ ಸೇರಿ ಯಾವುದೇ ಭೀಕರ ದಾಳಿಯ ವೇಳೆಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದು ಗಂಟೆಗೆ 55 ಕಿ.ಮೀ ವೇಗದಲ್ಲಿ ಸಂಚರಿಸಲಿದೆ.

4. ಆಧುನಿಕ ರೆಡಾರ್‌ ವ್ಯವಸ್ಥೆ, ಅತ್ಯಾಧುನಿಕ ಸಂವೇದಕಗಳು, ವೈರಿಗಳ ಕುರಿತು ಮಾಹಿತಿ ಒದಗಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

5. ಭೂಮಿಯಿಂದ ಆಗಸಕ್ಕೆ ನೆಗೆಯುವ, ಯಾವುದೇ ಶಸ್ತ್ರಾಸ್ತ್ರಗಳ ಕುರಿತು ಮಾಹಿತಿ ನೀಡುವ ಸಾಮರ್ಥ್ಯದ ಜತೆಗೆ ರಾಕೆಟ್‌ ಉಡಾವಣೆಗೊಳಿಸುವ ಲಾಂಚರ್‌ಗಳಿವೆ.

ಇದನ್ನೂ ಓದಿ | ಸಂಪಾದಕೀಯ: ಅಗ್ನಿ ಕ್ಷಿಪಣಿಯಲ್ಲಿದೆ ಠಕ್ಕ ಚೀನಾಗೆ ಭಾರತದ ದಿಟ್ಟ ಎಚ್ಚರಿಕೆ

Exit mobile version