ನವದೆಹಲಿ: ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಭಾರತವು ಕ್ಷಿಪಣಿ ಪರೀಕ್ಷೆಗೆ ಸಿದ್ಧವಾಗಿರುವ ಬೆನ್ನಲ್ಲೇ ಕುತಂತ್ರಿ ಚೀನಾ, ಹಿಂದೂ ಮಹಾಸಾಗರದಲ್ಲಿ ಬೇಹುಗಾರಿಕೆ ಹಡಗು ‘ಯುವಾನ್ ವಾಂಗ್-6’ಅನ್ನು (Chinese Spy Ship) ನಿಯೋಜಿಸಿದೆ. ಆದರೆ, ಈ ಹಡಗು (Yuan Wang-6) ಭಾರತದ ವಿಶೇಷ ಆರ್ಥಿಕ ವಲಯವನ್ನು (Exclusive Economic Zone-EEZ) ಪ್ರವೇಶಿಸದಂತೆ ತಡೆಯಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ನವೆಂಬರ್ 10ರಂದು ಒಡಿಶಾ ಕರಾವಳಿಯಲ್ಲಿ ಕ್ಷಿಪಣಿ ಪರೀಕ್ಷೆಗೆ ಭಾರತ ಸಿದ್ಧ
ಕ್ಷಿಪಣಿ ಮೇಲೆ ನಿಗಾ ಇಡಲು ಬೇಹುಗಾರಿಕೆ ಹಡಗು ನಿಯೋಜಿಸಿದ ಚೀನಾ
ಚೀನಾ ಕುತಂತ್ರಕ್ಕೆ ಪ್ರತಿಯಾಗಿ ಅದರ ನೌಕೆ ಇಇಝಡ್ ಪ್ರವೇಶಿಸದಂತೆ ತಡೆಯಲು ನಿರ್ಧಾರ
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ನೇವಿ (PLAN)ಯ ಹಡಗನ್ನು ಹಿಂದೂ ಮಹಾಸಾಗರದಲ್ಲಿ ನಿಯೋಜಿಸಲಾಗಿದೆ. ಇದು ಸಂಚಾರ ಆರಂಭಿಸಿದ್ದು, ಭಾರತವು ನವೆಂಬರ್ 10ರಂದು ಪರೀಕ್ಷೆ ಮಾಡಲಿರುವ ಕ್ಷಿಪಣಿಯ ಮೇಲೆ ನಿಗಾ ಇಡಲಿದೆ ಎಂದು ತಿಳಿದುಬಂದಿದೆ. ಹಾಗಾಗಿಯೇ, ಭಾರತವು ಯಾವುದೇ ಕಾರಣಕ್ಕೂ ಚೀನಾದ ಬೇಹುಗಾರಿಕೆ ಹಡಗು ವಿಶೇಷ ಆರ್ಥಿಕ ವಲಯವನ್ನು ಪ್ರವೇಶಿಸದಂತೆ ತಡೆಯಲು ತೀರ್ಮಾನಿಸಿದೆ.
ಸಾಗರ ಪ್ರದೇಶದಲ್ಲಿ ಯಾವುದೇ ರಾಷ್ಟ್ರದ ಅನುಮತಿ ಇಲ್ಲದೆ ಮತ್ತೊಂದು ರಾಷ್ಟ್ರದ ನೌಕೆಯು ಪ್ರವೇಶ ಪಡೆಯಲು ಆಗುವುದಿಲ್ಲ. ಚೀನಾದ ಸಂಶೋಧನಾ ನೌಕೆ ‘ಶಿ ಯಾನ್ 1’ ಅನ್ನು ಸಹ ಭಾರತೀಯ ನೌಕಾಪಡೆಯು 2019ರಲ್ಲಿ ಪೋರ್ಟ್ ಬ್ಲೇರ್ ಬಳಿಯ ಇಇಝಡ್ ಪ್ರವೇಶಿಸದಂತೆ ತಡೆದಿತ್ತು.
ಇದನ್ನೂ ಓದಿ | ಶ್ರೀಲಂಕಾ ಬಂದರು ತಲುಪಿದ ಚೀನಾ ಬೇಹುಗಾರಿಕೆ ನೌಕೆ; ಅದಕ್ಕೂ ಮೊದಲೇ ವಿಮಾನ ಕಳಿಸಿದ ಭಾರತ