Site icon Vistara News

INS Kolkata: 40 ತಾಸು ಹೋರಾಡಿ 35 ಕಡಲ್ಗಳ್ಳರ ಬಂಧನ, ಹೀಗಿತ್ತು ನೌಕಾಪಡೆ ಆಪರೇಷನ್

Indian Navy

Indian Navy's 40-Hour Rescue Operation: 35 Pirates Surrender, 17 Crew Members Freed

ನವದೆಹಲಿ: ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ ಮಧ್ಯೆ (Israel Palestine War) ಯುದ್ಧ ಶುರುವಾದ ಬಳಿಕ ಸಮುದ್ರ ಪ್ರದೇಶದಲ್ಲಿ ಕಡಲ್ಗಳ್ಳರು (Pirates), ಹಡಗುಗಳ ಹೈಜಾಕ್‌ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಆದರೆ, ಭಾರತೀಯ ನೌಕಾಪಡೆಯು (Indian Navy) ಅರಬ್ಬೀ ಸಮುದ್ರದಲ್ಲಿ ದಕ್ಷವಾಗಿ ಕಡಲ್ಗಳ್ಳರನ್ನು ನಿಗ್ರಹಿಸುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಭಾರತದ ಸಮುದ್ರ ಗಡಿಯಲ್ಲಿ ಸುಮಾರು 40 ತಾಸು ಸತತವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಸುಮಾರು 35 ಕಡಲ್ಗಳ್ಳರನ್ನು ಬಂಧಿಸಿದೆ. ಅಷ್ಟೇ ಅಲ್ಲ, ನೌಕೆಯೊಂದರ 17 ಸಿಬ್ಬಂದಿಯನ್ನು ರಕ್ಷಿಸಿದೆ.

ಭಾರತದ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರು ನೌಕೆಯೊಂದನ್ನು ಹೈಜಾಕ್‌ ಮಾಡಿ, ತಮ್ಮ ರುಯೆನ್‌ ಹಡಗಿನಲ್ಲಿ 17 ಸಿಬ್ಬಂದಿಯನ್ನು ಬಂಧಿಸಿಟ್ಟಿದ್ದರು. ಇದರ ಕುರಿತು ನಿಖರ ಮಾಹಿತಿ ಪಡೆದ ಭಾರತೀಯ ನೌಕಾಪಡೆಯು, ಐಎನ್‌ಎಸ್‌ ಕೋಲ್ಕೊತಾ ನೌಕೆಯ ಮೂಲಕ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಐಎನ್‌ಎಸ್‌ ಸುಭದ್ರ ನೌಕೆಯೂ ಐಎನ್‌ಎಸ್‌ ಕೋಲ್ಕೊತಾಗೆ ರಕ್ಷಣೆಯಲ್ಲಿ ನೆರವು ನೀಡಿದೆ. ಆ ಮೂಲಕ ಎಲ್ಲ 17 ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ನೌಕಾಪಡೆಯೇ ಮಾಹಿತಿ ನೀಡಿದೆ.

ಅತ್ಯಾಧುನಿಕ ಡ್ರೋನ್‌ಗಳು, ಪಿ 81 ವಿಮಾನ ಹಾಗೂ ಸಿ 17 ವಿಮಾನಗಳನ್ನೂ ಕೂಡ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಸಿ 17 ಯುದ್ಧವಿಮಾನದ ಮೂಲಕ ನೌಕೆಯ ಸಿಬ್ಬಂದಿಯನ್ನು ಏರ್‌ಲಿಫ್ಟ್‌ ಮಾಡಲಾಗಿದೆ ಎಂದು ತಿಳಿಸಿದೆ. ಕಡಲ್ಗಳ್ಳರ ಬಳಿ ಭಾರಿ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು ಹಾಗೂ ಮಾದಕವಸ್ತುವನ್ನು ಕೂಡ ನೌಕಾಪಡೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇವರು ಸೋಮಾಲಿಯಾದ ಕಡಲ್ಗಳ್ಳರು ಎಂದು ಕೂಡ ನೌಕಾಪಡೆಯು ಮಾಹಿತಿ ನೀಡಿದೆ.

ಇದನ್ನೂ ಓದಿ: INS Jatayu: ಮಾಲ್ಡೀವ್ಸ್‌ ಬಳಿಯೇ ನೌಕಾ ನೆಲೆ ನಿರ್ಮಿಸಿದ ಭಾರತ; ಇದು ಹೇಗೆ ಗೇಮ್‌ ಚೇಂಜರ್?

ಕೆಲ ತಿಂಗಳ ಹಿಂದಷ್ಟೇ ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನದ 19 ನಾಗರಿಕರಿದ್ದ ಹಡಗನ್ನು ಅಪಹರಿಸಿದ್ದ ಸೋಮಾಲಿಯಾ ಕಡಲ್ಗಳ್ಳರಿಗೆ ಭಾರತದ ನೌಕಾಪಡೆಯು ತಕ್ಕ ಶಾಸ್ತಿ ಮಾಡಿತ್ತು ಭಾರತೀಯ ನೌಕಾಪಡೆಯ ಐಎನ್‌ಎಸ್‌ ಸುಮಿತ್ರ ಸಮರನೌಕೆಯು ಪಾಕಿಸ್ತಾನದ ಹಡಗು ಹಾಗೂ 19 ನಾಗರಿಕರನ್ನು ರಕ್ಷಿಸಿತ್ತು. ನೌಕಾಪಡೆಯ ಸಿಬ್ಬಂದಿಯು 11 ಕಡಲ್ಗಳ್ಳರನ್ನು ಬಂಧಿಸಿದ್ದರು. ಪಾಕಿಸ್ತಾನದ ಮೀನುಗಾರಿಕಾ ನೌಕೆಯಾದ ಅಲ್‌ ನಯೀಮಿಯನ್ನು ಸೊಮಾಲಿಯಾದ ಉತ್ತರ ಕರಾವಳಿಯಲ್ಲಿ ಕಡಲ್ಗಳ್ಳರು ಅಪಹರಿಸಿದ್ದರು. ಐಎನ್‌ಎಸ್‌ ಸುಮಿತ್ರ ಯುದ್ಧನೌಕೆಯ ಮೂಲಕ ಕಡಲ್ಗಳ್ಳರಿಂದ 19 ಜನರನ್ನು ರಕ್ಷಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version