ನವದೆಹಲಿ: ಸಾಗರ ಪ್ರದೇಶದಲ್ಲಿ ವೈರಿಗಳ ಮೇಲೆ ನಿಗಾ ಇಡುವುದು, ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆ ಕೈಗೊಳ್ಳುವುದರಲ್ಲಿ ಸಮರ್ಥವಾಗಿರುವ ಜತೆಗೆ ಭಾರತೀಯ ನೌಕಾಪಡೆಯು (Indian Navy) ಬೇರೆಯವರನ್ನು ರಕ್ಷಣೆ ಮಾಡುವುದರಲ್ಲಿಯೂ ಅಷ್ಟೇ ದಕ್ಷತೆ ಹಾಗೂ ಮಾನವೀಯತೆಯನ್ನು ಹೊಂದಿದೆ. ಇದಕ್ಕೆ ನಿದರ್ಶನ ಎಂಬಂತೆ, ನೌಕಾಪಡೆಯ ಸೀ ಕಿಂಗ್ ಚಾಪರ್ (Sea King Chopper) ಬಳಸಿ, ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನೊಬ್ಬನನ್ನು ರಕ್ಷಿಸಲಾಗಿದೆ. ಭಾರತೀಯ ನೌಕಾಪಡೆಯ ಮಾನವೀಯ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು, ಮುಂಬೈನಿಂದ ಸುಮಾರು 370 ಕಿಲೋಮೀಟರ್ ದೂರದ ಸಾಗರ ಪ್ರದೇಶದಲ್ಲಿ ಚೀನಾದ ಝೋಂಗ್ ಶಾನ್ ಮೆನ್ ಎಂಬ ನೌಕೆಯು ಹವಾಮಾನ ವೈಪರೀತ್ಯದಿಂದ ಚಲಿಸಲು ಆಗಿಲ್ಲ. ಇನ್ನು, ಹಡಗಿನ ನಾವಿಕನಿಗೆ ಗಂಭೀರವಾಗಿ ಗಾಯವಾಗಿದ್ದು, ರಕ್ತಸ್ರಾವದಿಂದ ತೀವ್ರ ತೊಂದರೆಗೆ ಸಿಲುಕಿದ್ದ. ಈ ಕುರಿತು ಮುಂಬೈನಲ್ಲಿರುವ ಮರಿಟೈಮ್ ರೆಸ್ಕ್ಯೂ ಕೋ-ಆಪರೇಷನ್ ಸೆಂಟರ್‌ಗೆ ಮಂಗಳವಾರ (ಜುಲೈ 24) ರಾತ್ರಿ ಕರೆ ಬಂದಿದೆ. ಕೂಡಲೇ 51 ವರ್ಷದ ನಾವಿಕನ ರಕ್ಷಣೆ ಮಾಡಬೇಕು ಎಂದು ಕರೆ ಮಾಡಲಾಗಿತ್ತು.
#IndianNavy successfully evacuates a Critically injured #Chinese Mariner from Bulk Carrier ZHONG SHAN MEN, 200nm (approx 370km) from #Mumbai.
— SpokespersonNavy (@indiannavy) July 24, 2024
Maritime Rescue Co-ordination Centre, Mumbai received a distress call on PM #23Jul 24 from the bulk carrier reporting heavy blood loss… pic.twitter.com/FyhlgnEUUR
ಇದಾದ ಬಳಿಕ ಭಾರತೀಯ ನೌಕಾಪಡೆಯ ಸೀ ಕಿಂಗ್ ಹೆಲಿಕಾಪ್ಟರ್‌ಅನ್ನು ಶಿಖ್ರಾದಲ್ಲಿರುವ ಭಾರತದ ನೌಕಾಪಡೆಯ ಏರ್ ಸ್ಟೇಷನ್‌ನಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಹವಾಮಾನ ವೈಪರೀತ್ಯದ ಕುರಿತು ಮಾಹಿತಿ ಇದ್ದರೂ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆಯು ಚೀನಾದ ನಾವಿಕನನ್ನು ರಕ್ಷಿಸಿ, ಆತನಿಗೆ ವೈದ್ಯಕೀಯ ನೆರವು ನೀಡಿದೆ. ಈ ರೋಚಕ ವಿಡಿಯೊವನ್ನು ನೌಕಾಪಡೆಯು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನೌಕಾಪಡೆಯ ಮಾನವೀಯತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಭಾರತದ ನೌಕಾಪಡೆಯ ಐಎನ್‌ಎಸ್ ಸುಮಿತ್ರ ಸಮರನೌಕೆಯ ಮೂಲಕ ಅರಬ್ಬೀ ಸಮುದ್ರದಲ್ಲಿ ಸೋಮಾಲಿಯಾ ಕಡಲ್ಗಳ್ಳರಿಂದ ಪಾಕಿಸ್ತಾನದ 19 ನಾವಿಕರನ್ನು ರಕ್ಷಿಸಲಾಗಿತ್ತು. ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನದ 19 ನಾಗರಿಕರಿದ್ದ ಹಡಗನ್ನು ಅಪಹರಿಸಿದ್ದ ಸೋಮಾಲಿಯಾ ಕಡಲ್ಗಳ್ಳರನ್ನು ಹಿಮ್ಮೆಟ್ಟಿಸಿ ರಕ್ಷಣೆ ಮಾಡಲಾಗಿತ್ತು. ಇದಕ್ಕೂ ಕೆಲ ದಿನಗಳ ಮೊದಲು ಇರಾನ್ ಮೂಲದ ಹಡಗು ಹಾಗೂ ಹಡಗಿನಲ್ಲಿದ್ದ 17 ಜನರನ್ನು ರಕ್ಷಿಸಲಾಗಿತ್ತು.
ಇದನ್ನೂ ಓದಿ: INS Brahmaputra: ನೌಕಾಪಡೆಯ ಐಎನ್‌ಎಸ್ ಯುದ್ಧನೌಕೆಯಲ್ಲಿ ಭೀಕರ ಅಗ್ನಿ ದುರಂತ; ನಾವಿಕ ನಾಪತ್ತೆ