ನವ ದೆಹಲಿ: ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಈ ಮಾತಿನ ಒಳಾರ್ಥ ಏನಿದ್ದರೂ, ನಾವಿದನ್ನು ನಮ್ಮ ನಿತ್ಯದ ಜೀವನದಲ್ಲಿ, ‘ವೈದ್ಯರು ದೇವರಿಗೆ ಸಮಾನ’ ಎಂಬರ್ಥದಲ್ಲಿಯೇ ಉಲ್ಲೇಖ ಮಾಡುತ್ತೇವೆ. ಅಂತೆಯೇ ಇಲ್ಲೊಬ್ಬರು ಭಾರತೀಯ ಮೂಲದ, ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನ ಕ್ವೀನ್ ಎಲೆಜಿಬಿತ್ನ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರೊಬ್ಬರು ವಿಮಾನದಲ್ಲಿ 43 ವರ್ಷದ ವ್ಯಕ್ತಿಯೊಬ್ಬರ ಪಾಲಿಗೆ ಅಕ್ಷರಶಃ ಮರುಜನ್ಮಕೊಟ್ಟ ದೇವರಾಗಿದ್ದಾರೆ. 10 ತಾಸು ಪ್ರಯಾಣದಲ್ಲಿ ಎರಡು ಬಾರಿ ಹೃದಯಸ್ತಂಭನಕ್ಕೆ ಒಳಗಾದ ಅವರ ಪ್ರಾಣವನ್ನು ರಕ್ಷಿಸಿಕೊಟ್ಟಿದ್ದಾರೆ.
ಡಾ. ವಿಶ್ವರಾಜ್ ವೇಮಲಾ ಅವರು ಬರ್ಮಿಂಗ್ಹ್ಯಾಮ್ ಆಸ್ಪತ್ರೆಯಲ್ಲಿ ಹೆಪಟಾಲಜಿಸ್ಟ್. ಅಂದರೆ ಲಿವರ್, ಪಿತ್ತಕೋಶ ಸಂಬಂಧಿತ ರೋಗಕ್ಕೆ ಚಿಕಿತ್ಸೆ ನೀಡುವ ತಜ್ಞ. ಅವರು ಮೂಲತಃ ಬೆಂಗಳೂರಿನವರು. ನವೆಂಬರ್ ತಿಂಗಳಲ್ಲಿ ತನ್ನ ತಾಯಿಯನ್ನು ಬೆಂಗಳೂರಿಗೆ ಕಳಿಸಲೆಂದು ಅವರೊಂದಿಗೆ ತಾವೂ ವಿಮಾನದಲ್ಲಿ ಹೊರಟಿದ್ದರು. ಲಂಡನ್ ಏರ್ಪೋರ್ಟ್ನಲ್ಲಿ ವಿಮಾನ ಹತ್ತಿದ್ದ ಕೆಲ ತಾಸುಗಳಲ್ಲಿ, ವಿಮಾನದಲ್ಲಿ ಒಂದು ಘೋಷಣೆ ಹೊರಬಿತ್ತು. ಯಾರಾದರೂ ವೈದ್ಯರಿದ್ದೀರಾ? ಪ್ರಯಾಣಿಕರೊಬ್ಬರಿಗೆ ಹೃದಯಸ್ತಂಭನ ಆಗಿದೆ ಎಂದು ಸಿಬ್ಬಂದಿ ಕೇಳುತ್ತಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಡಾ. ವಿಶ್ವರಾಜ್ ವೇಮಲಾ ರೋಗಿಯ ಬಳಿ ಧಾವಿಸಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟರು. ತುರ್ತು ಚಿಕಿತ್ಸೆ ಕಿಟ್ನ್ನು ವಿಮಾನ ಸಿಬ್ಬಂದಿ ಒದಗಿಸಿದರು. ಅದರಲ್ಲಿ ಹೃದಯಸ್ತಂಭನಕ್ಕೆ ಒಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡಲು, ಆಮ್ಲಜನಕ ಒದಗಿಸಿ, ಉಸಿರಾಡುವಂತೆ ಮಾಡಲು ಅಗತ್ಯವಿರುವ ಉಪಕರಣಗಳು ಇದ್ದರೂ, ಬಳಿಕ ಅವರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಬೇಕಾದ ವೈದ್ಯಕೀಯ ಉಪಕರಣಗಳು ಇರಲಿಲ್ಲ. ಹಲವು ಪ್ರಯಾಣಿಕರ ಬಳಿ ಈ ಬಗ್ಗೆ ಕೇಳಿದಾಗ ಒಬ್ಬೊಬ್ಬರೂ ಒಂದೊಂದು ಉಪಕರಣ ಕೊಟ್ಟರು. ಹೃದಯ ಬಡಿತ ಚೆಕ್ ಮಾಡುವ, ಬ್ಲಡ್ ಪ್ರೆಶರ್ ಮಟ್ಟ ಪರಿಶೀಲಿಸುವ, ನಾಡಿ ಮಿಡಿತ ಮತ್ತು ಸಕ್ಕರೆ ಅಂಶವನ್ನು ಚೆಕ್ ಮಾಡುವ ಮಶಿನ್ಗಳನ್ನು ಉಳಿದ ಪ್ರಯಾಣಿಕರೇ ಒದಗಿಸಿದರು. ಅವುಗಳ ಸಹಾಯದಿಂದ ರೋಗಿಗೆ ಚಿಕಿತ್ಸೆ ನಡೆಯುತ್ತಿತ್ತು.
ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿ ಸುಮಾರು 1 ತಾಸಿನ ಬಳಿಕ ಎಚ್ಚೆತ್ತುಕೊಂಡು, ವೈದ್ಯರ ಬಳಿ ನಿಧಾನಕ್ಕೆ ಮಾತನಾಡಲು ಶುರು ಮಾಡಿದ್ದರು. ಆದರೆ ಕೆಲವೇ ಹೊತ್ತಲ್ಲಿ ಅವರು ಮತ್ತೊಮ್ಮೆ ಹೃದಯಸ್ತಂಭನಕ್ಕೆ ಒಳಗಾದರು. ಆಗಂತೂ ಇನ್ನೂ ಹೆಚ್ಚಿನ ಪ್ರಮಾಣದ ಚಿಕಿತ್ಸೆ ಅವರಿಗೆ ಬೇಕಿತ್ತು. ಡಾ. ವೇಮಲಾ ಆಗಲೂ ಎದೆಗುಂದಲಿಲ್ಲ. ಉಳಿದ ಪ್ರಯಾಣಿಕರಂತೆ, ವಿಮಾನ ಸಿಬ್ಬಂದಿಯಂತೆ ವೈದ್ಯರ ಮುಖದಲ್ಲಿ ಕೂಡ ದುಗುಡ ಎದ್ದು ಕಾಣುತ್ತಿತ್ತು. ಆದರೂ ತಮ್ಮ ಸಮಯಪ್ರಜ್ಞೆಯಿಂದ ಎರಡನೇ ಬಾರಿಯೂ ಆ ವ್ಯಕ್ತಿಯ ಜೀವ ಉಳಿಸಿದರು. ಅಲ್ಲಿ ಹಲವರು ವೈದ್ಯರಿಗೆ ನೆರವು ಕೂಡ ನೀಡಿದ್ದಾರೆ. 10 ತಾಸಿನ ಅವಧಿ ಪ್ರಯಾಣದಲ್ಲಿ ಐದು ತಾಸು ರೋಗಿಯ ರಕ್ಷಣೆಯಲ್ಲೇ ಕಳೆದಿದೆ. ಬಳಿಕ ಪೈಲೆಟ್ ಮುಂಬಯಿಯಲ್ಲಿ ವಿಮಾನವನ್ನು ತುರ್ತು ಲ್ಯಾಂಡ್ ಮಾಡಿ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ವೇಮಲಾ ‘ನನ್ನ ವೃತ್ತಿ ಜೀವನದಲ್ಲೇ ಇಂಥ ಕ್ಷಣ ಎದುರಿಸಿರಲಿಲ್ಲ. ಈ ಘಟನೆ ಯಾವತ್ತೂ ನನಗೆ ನೆನಪಿರುತ್ತದೆ. ಹೃದಯಸ್ತಂಭನಕ್ಕೆ ಒಳಗಾಗಿದ್ದ ವ್ಯಕ್ತಿ ಮುಂಬಯಿಯಲ್ಲಿ ವಿಮಾನದಿಂದ ನಿರ್ಗಮಿಸುವಾಗ ಕಣ್ತುಂಬಿಕೊಂಡು, ನನಗೆ ಕೃತಜ್ಞತೆ ಸಲ್ಲಿಸಿದರು. ಒಟ್ಟಾರೆ ಇದೊಂದು ಭಾವನಾತ್ಮಕ ಕ್ಷಣವಾಗಿತ್ತು’ ಎಂದು ಹೇಳಿಕೊಂಡಿದ್ದಾರೆ. ಹಾಗೇ, ಡಾ. ವಿಶ್ವರಾಜ್ ವೇಮಲಾ ಕೆಲಸ ಮಾಡುತ್ತಿರುವ ಆಸ್ಪತ್ರೆ ಕೂಡ ಈ ವಿಷಯವನ್ನು ಟ್ವೀಟ್ ಮೂಲಕ ಹಂಚಿಕೊಂಡಿದೆ.
ಇದನ್ನೂ ಓದಿ: ಹಣ್ಣು ತಿನ್ನುತ್ತೀರಾ ಎಂದು ಕೇಳಿ, ಇಬ್ಬರು ವೈದ್ಯರಿಗೆ ಇರಿದ ಗಾಯಾಳು; ಮುಷ್ಕರ ಶುರು ಮಾಡಿದ ಮಹಾರಾಷ್ಟ್ರ ಡಾಕ್ಟರ್ಸ್