ನವದೆಹಲಿ: ಭಾರತೀಯ ರೈಲ್ವೆ (Indian Railways) ಇಲಾಖೆ ತನ್ನ ಮೂಲಸೌಕರ್ಯ ಮತ್ತು ಪ್ರಯಾಣಿಕರ ಅನುಕೂಲ ಹೆಚ್ಚಿಸಲು ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಈ ಪ್ರಯತ್ನದ ಭಾಗವಾಗಿ ಹೊಸ ರೈಲು ಸೇವೆಗಳ ಪರಿಚಯ, ನಿಲ್ದಾಣದ ಪುನರುಜ್ಜೀವನ, ಒನ್ ಸ್ಟೇಷನ್ ಒನ್ ಪ್ರಾಡಕ್ಟ್ (OSOP) ಯೋಜನೆಯ ಅನುಷ್ಠಾನ ಮತ್ತು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ (PMBJKs) ಮಳಿಗೆಗಳ ಸ್ಥಾಪನೆ ಮುಂತಾದ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.
ಏನಿದು ಪುಶ್-ಪುಲ್ ರೈಲು?
ವಿಶೇಷ ಎಂದರೆ ಭಾರತೀಯ ರೈಲ್ವೆ ಹೈಸ್ಪೀಡ್ ಬುಲೆಟ್ ರೈಲುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಆವಿಷ್ಕಾರಗಳ ಸಾಲಿಗೆ ಇತ್ತೀಚಿನ ಸೇರ್ಪಡೆ ಪುಶ್-ಪುಲ್ ರೈಲುಗಳ (Push-Pull trains) ಪರಿಚಯ. ಏಷ್ಯಾದ ಅತಿದೊಡ್ಡ ರೈಲು ಜಾಲವಾಗಿ, ಭಾರತೀಯ ರೈಲ್ವೆ ಪ್ರತಿದಿನ 1 ಕೋಟಿಗೂ ಹೆಚ್ಚು ಪ್ರಯಾಣಿಕರ ಸಾರಿಗೆ ಅಗತ್ಯಗಳನ್ನು ಪೂರೈಸುತ್ತಿದೆ. ಆ ಪೈಕಿ ಬಹುತೇಕರು ಮಧ್ಯಮ ವರ್ಗದವರು ಮತ್ತು ಕಡಿಮೆ ಆದಾಯ ಹೊಂದಿದವರು. ಈ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಭಾರತೀಯ ರೈಲ್ವೆ ಪುಶ್-ಪುಲ್ ರೈಲುಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್, ಹೈಸ್ಪೀಡ್ ರೈಲಿನಂತೆಯೇ ಪುಶ್-ಪುಲ್ ರೈಲು ಕೂಡ ಉತ್ತಮ ದರ್ಜೆಯ ಪ್ರಯಾಣದ ಅನುಭವವನ್ನು ನೀಡಲಿದೆ. ಇದರಲ್ಲಿ ಎಸಿ ಇರುವುದಿಲ್ಲ. ಹೀಗಾಗಿ ಟಿಕೆಟ್ ದರವೂ ಕಡಿಮೆ ಇರಲಿದೆ. ಆರಂಭದ ಪುಶ್-ಪುಲ್ ರೈಲು ಸೇವೆಯು ಪಟನಾ ಮತ್ತು ಮುಂಬೈ ನಡುವೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದು ಈ ನಗರಗಳ ನಡುವೆ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಮೆಟ್ರೋ ವ್ಯವಸ್ಥೆಯಂತೆಯೇ ಈ ನೂತನ ರೈಲಿನ ವಿನ್ಯಾಸವು ಎರಡು ಎಂಜಿನ್‌ಗಳನ್ನು ಒಳಗೊಂಡಿದೆ. ಒಂದು ರೈಲಿನ ಮುಂಭಾಗದಲ್ಲಿರೆ ಇನ್ನೊಂದು ಹಿಂಭಾಗದಲ್ಲಿದೆ. ಈ ಎರಡೂ ಎಂಜಿನ್‌ಗಳು ರೈಲನ್ನು ಒಂದೇ ದಿಕ್ಕಿನಲ್ಲಿ ತಳ್ಳಲು ಮತ್ತು ಎಳೆಯಲು ಸಹಕರಿಸುತ್ತವೆ.
ಅನುಕೂಲಗಳೇನು?
ಈ ವಿನ್ಯಾಸದ ಪ್ರಮುಖ ಅನುಕೂಲವೆಂದರೆ ಸಾಂಪ್ರದಾಯಿಕ ಮಾದರಿಗಳಿಗೆ ಹೋಲಿಸಿದರೆ ರೈಲಿನ ವೇಗವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಇದು ಹೆಚ್ಚಿನ ಬೋಗಿಗಳನ್ನು ಸೇರಿಸಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಏಕಕಾಲದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಪುಶ್-ಪುಲ್ ರೈಲುಗಳಿಗೆ ಕಡಿಮೆ ಶಕ್ತಿಯುತ ಎಂಜಿನ್ ಸಾಕಾಗುತ್ತದೆ. ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ. ಎರಡು ಎಂಜಿನ್ ಗಳನ್ನು ಹೊಂದಿದ್ದರೂ ಈ ರೈಲುಗಳನ್ನು ಓರ್ವ ಚಾಲಕ ನಿರ್ವಹಿಸುತ್ತಾನೆ. ಈ ರೈಲು ಸಾಮಾನ್ಯ ಮತ್ತು ಸ್ಲೀಪರ್ ಬೋಗಿ ಒಳಗೊಂಡಂತೆ ಒಟ್ಟು 22 ಬೋಗಿಗಳನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 70 Hours Work Debate: 5 ದಿನಗಳ ವೀಕ್ ಸತ್ತಿದೆ: ನಾರಾಯಣ ಮೂರ್ತಿ ಪರ ಹರ್ಷ ಗೋಯೆಂಕಾ ಬ್ಯಾಟಿಂಗ್
ಪುಶ್-ಪುಲ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತೆ ಸುಧಾರಿತ ಒಳಾಂಗಣ ಮತ್ತು ಉನ್ನತ ದರ್ಜೆಯ ಸೌಲಭ್ಯಗಳನ್ನು ನೀಡಲಿದೆ. ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ರೈಲುಗಳು ಮುಚ್ಚಿದ ವೆಸ್ಟಿಬುಲ್‌ಗಳು, ಅಗ್ನಿಶಾಮಕ ಎಚ್ಚರಿಕೆ ವ್ಯವಸ್ಥೆಗಳು, ಟಾಕ್-ಬ್ಯಾಕ್ ವ್ಯವಸ್ಥೆಗಳು ಮತ್ತು ಇತರ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತವೆ. ಚೆನ್ನೈನಲ್ಲಿರುವ ಭಾರತೀಯ ರೈಲ್ವೆಯ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ(ICF)ನಲ್ಲಿ ಈ ರೈಲನ್ನು ತಯಾರಿಸಲಾಗುತ್ತದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ